ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿರುವ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಅನಿಲ್ ಸಾಂಬೆಕರ್ (32) ಅವರನ್ನು ಕೊಂದು, ಮೃತದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಟ್ಟಿದ್ದಾನೆ. ಈ ದಂಪತಿ ಕಳೆದ ಒಂದು ವರ್ಷದಿಂದ ದೊಡ್ಡ ಕನ್ನಹಳ್ಳಿಯಲ್ಲಿ ವಾಸಿಸುತ್ತಿದ್ದರು ಮತ್ತು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಸಮಯದಿಂದೀಚೆಗೆ ‘ವರ್ಕ್ ಫ್ರಂ ಹೋಂ’ ವ್ಯವಸ್ಥೆಯಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕೊಲೆಯ ನಂತರ, ರಾಕೇಶ್ ತನ್ನ ಪತ್ನಿಯ ಪೋಷಕರಿಗೆ ಫೋನ್ ಮಾಡಿ ತಾನು ಎಸಗಿದ ಕೃತ್ಯವನ್ನು ತಿಳಿಸಿದ್ದಾನೆ. ಈ ಸುದ್ದಿ ಕೇಳಿ ಬೆಚ್ಚಿಬಿದ್ದ ಗೌರಿಯ ಪೋಷಕರು ಮಹಾರಾಷ್ಟ್ರದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ತಕ್ಷಣ ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ತಿಂಗಳ ಹಿಂದಷ್ಟೇ ರಾಕೇಶ್, ಗೌರಿ ಈ ಮನೆಗೆ ಬಾಡಿಗೆ ಬಂದಿದ್ದು, ನಿನ್ನೆ (ಮಾರ್ಚ್ 26) ರಾತ್ರಿ 12.30ಕ್ಕೆ ಕೃತ್ಯವೆಸಗಿ ಮನೆಯಿಂದ ಹೊರಬಂದು ಪರಾರಯಾಗಿದ್ದಾನೆ. ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಸೂಟ್‌ಕೇಸ್‌ನಲ್ಲಿ ತುಂಬಿಟ್ಟಿದ್ದ ಗೌರಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ದಂಪತಿಗಳ ನಡುವೆ ಜಗಳವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಈ ಕೃತ್ಯದ ಹಿನ್ನೆಲೆ ಮತ್ತು ನಿಖರ ಕಾರಣಗಳ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.