ಮಾರ್ಚ್ 1, 2024. ಬೆಂಗಳೂರಿನ ಐಟಿಐಪಿಎಲ್ ರಸ್ತೆಯ ಜನನಿಬಿಡ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟದ ಸಮಯ.. ಆಹಾರದ ಪ್ಲೇಟುಗಳ ಸದ್ದು, ಗ್ರಾಹಕರ ಗಲಾಟೆ, ಸಿಬ್ಬಂದಿಯ ತರಾತುರಿಯ ನಡುವಲ್ಲೇ ಹಠಾತ್ ಘಟನೆಯೊಂದು ಸಂಭವಿಸಿತ್ತು… ಮಧ್ಯಾಹ್ನ 12:55ಕ್ಕೆ ಸರಿಯಾಗಿ ಭೂಕಂಪದಂತಹ ದೊಡ್ಡ ಸದ್ದು ಕೇಳಿ ಬಂತು! ಕಿವಿಗಡಚಿಕ್ಕುವ ಸ್ಫೋಟದ ಶಬ್ದಕ್ಕೆ ಕಿಟಕಿಗಳು ಚೂರಾದವು. ಧೂಳು, ರಕ್ತ, ಚೀರಾಟ, ಕೂಗಾಟದ ಸದ್ದು ಕೇಳಿಸಿತು. ಹೋಟೆಲ್ ಸಿಬ್ಬಂದಿ ಸೇರಿದಂತೆ 9 ಜನ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸದೇ ಇದ್ದರೂ ಕೂಡಾ, ಸಿಲಿಕಾನ್ ಸಿಟಿಯ ‘ಸಾಮಾನ್ಯ’ದಿನವೊಂದು ಹೃದಯವಿದ್ರಾವಕ ಅಧ್ಯಾಯಕ್ಕೆ ಸಾಕ್ಷಿಯಾಯ್ತು..
ಇದು ಸಾಮಾನ್ಯ ಸ್ಫೋಟವಲ್ಲ..! ಇದರ ಹಿಂದಿತ್ತು ಭಯೋತ್ಪಾದನೆಯ ‘ಡಾರ್ಕ್ ವೆಬ್’..!
ರಾಮೇಶ್ವರಂ ಕೆಫೆ ಸ್ಫೋಟ ಕೇವಲ ಒಂದು ಆಕಸ್ಮಿಕ ಘಟನೆ ಅಲ್ಲ. ಇದು ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಮತ್ತು ಲಷ್ಕರ್ – ಎ – ತೊಯ್ಬಾ ಉಗ್ರ ಸಂಘಠನೆಗಳ ಸಂಪರ್ಕ ಹೊಂದಿದ್ದ ಆರೋಪಿಗಳ ಕುತಂತ್ರ.. ಎನ್ಐಎ ತನಿಖೆ ವೇಳೆ ಈ ಕುರಿತಾಗಿ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಿದ್ದವು. ಸ್ಫೋಟಕ್ಕೆ ಕಾರಣವಾದ ಐಇಡಿ ಸಾಧನವನ್ನ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ರೂಪಿಸಿದ್ದರು. ಕೊಲ್ಕತ್ತಾದಲ್ಲಿ ಏಪ್ರಿಲ್ 12ರಂದು ಇಬ್ಬರೂ ಆರೋಪಿಗಳನ್ನು ಬಂಧಿಸಲಾಯಿತು. ಇವರೊಂದಿಗೆ ಅರಾಫತ್, ಮಾಜಿದ್ ಮುನೀರ್, ಮುಜಾಮಿಲ್ ಶರೀಫ್ ಸೇರಿದಂತೆ ಒಟ್ಟು 5 ಜನ ಆರೋಪಿಗಳನ್ನು ಎನ್ಐಎ ಪತ್ತೆ ಹಚ್ಚಿತು. ಸ್ಫೋಟ ನಡೆದ ಕೇವಲ 43 ದಿನಗಳಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನೂ ಬಂಧನ ಮಾಡಿದ ಭದ್ರತಾ ಪಡೆಗಳ ವೇಗ ಹಾಗೂ ಸೂಕ್ಷ್ಮತೆ ನಿಜಕ್ಕೂ ಶ್ಲಾಘನಾರ್ಹ..
‘ಸೈಬರ್ ಜಿಹಾದ್’ – ಇದು ಭಯೋತ್ಪಾದನೆಯ ಹೊಸ ಮುಖ
ಅಬ್ದುಲ್ ಮತೀನ್ ತಾಹಾ ಸಾಮಾನ್ಯನಲ್ಲ. ಈತ ಡಾರ್ಕ್ ವೆಬ್, ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಸ್ಫೋಟದ ಯೋಜನೆ ರೂಪಿಸಿದ್ದ ‘ಟೆಕ್-ಸ್ಯಾವಿ’ಭಯೋತ್ಪಾದಕ. ಎನ್‌ಐಎ ಪ್ರಕಾರ, ಈ ಆರೋಪಿಗಳು ಸೋಷಿಯಲ್ ಮೀಡಿಯಾ ಮೂಲಕ ಐಎಸ್ಐಎಸ್ ಪ್ರಚಾರಕರೊಂದಿಗೆ ಸಂಪರ್ಕದಲ್ಲಿದ್ದರು.
ರಾಮೇಶ್ವರಂ ಕೆಫೆಯನ್ನು ಆಯ್ಕೆಮಾಡಲು ಕಾರಣ?
ಬೆಂಗಳೂರು ಭಾರತದ ತಂತ್ರಜ್ಞಾನದ ಹೃದಯ. ಇಲ್ಲಿ ಸ್ಫೋಟ ಸಂಭವಿಸಿದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯ. ಆದರೆ, ಈ ಸ್ಫೋಟದ ಸಂಚುಕೋರರ ಯೋಜನೆಗಳು ಇನ್ನೂ ದೊಡ್ಡ ಮಟ್ಟದಲ್ಲಿತ್ತು. ನ್ಯಾಯಾಲಯಕ್ಕೆ ಎನ್‌ಐಎ ಸಲ್ಲಿಸಿರುವ 1 ಸಾವಿರ ಪುಟಗಳ ಚಾರ್ಜ್ ಶೀಟ್ ಪ್ರಕಾರ, ಈ ಗುಂಪಿನ ಯೋಜನೆಗಳು ಸಾಕಷ್ಟು ವಿಶಾಲವಾಗಿದ್ದು, ಕೇವಲ ಒಂದು ಸ್ಫೋಟವೇ ಅಲ್ಲದೆ ದೇಶದ ಇತರ ಭಾಗಗಳಲ್ಲಿ ಹಲವಾರು ದಾಳಿಗಳನ್ನು ಸಂಘಟಿಸಲು ಸಂಚು ರೂಪಿಸುತ್ತಿದ್ದರು.
ರಾಮೇಶ್ವರಂ ಕೆಫೆ ಸ್ಫೋಟದಿಂದ ಸೃಷ್ಟಿಯಾದ ಪ್ರಶ್ನೆಗಳು
ಈ ಘಟನೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇರಬೇಕಾದ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹಾಗೂ ಭದ್ರತಾ ಕೊರತೆಗಳತ್ತ ಬೊಟ್ಟು ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ಮೆಟಲ್ ಡಿಟೆಕ್ಟರ್‌ಗಳು ಸಾಕಾಗುವುದಿಲ್ಲ. ಜೊತೆಯಲ್ಲೇ ಇಂತಹ ಸಂಕೀರ್ಣ ತನಿಖೆಗಳಲ್ಲಿ ಎನ್ಐಎ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂಬ ಆಗ್ರಹಗಳೂ ಇವೆ. ಮತ್ತೊಂದೆಡೆ, ಯುವಕರನ್ನು ಭಯೋತ್ಪಾದನೆಯತ್ತ ಪ್ರಚೋದಿಸುವ ಆನ್‌ಲೈನ್ ವೇದಿಕೆಗಳು ತುಂಬಾನೇ ಅಪಾಯಕಾರಿ ಎಂದೂ ಸಾಬೀತಾಗಿದೆ.
ಒಂದು ವರ್ಷದ ನಂತರ: ಏನು ಬದಲಾಯಿತು?
ಸ್ಫೋಟದಲ್ಲಿ ಗಾಯಗೊಂಡಿದ್ದವರು ಚೇತರಿಸಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಮತ್ತೆ ಜನರಿಂದ ತುಂಬಿದೆ. ಆದರೆ, ಭಯೋತ್ಪಾದನೆಯ ಕರಿನೆರಳು ಇನ್ನೂ ಮಾಯವಾಗಿಲ್ಲ. ಎನ್ಐಎ ವಕೀಲರ ಪ್ರಕಾರ, ‘ಈ ಪ್ರಕರಣದ ತನಿಖೆ ಭಾರತದ ಭದ್ರತಾ ಚೌಕಟ್ಟಿನ ಸವಾಲುಗಳನ್ನು ಮತ್ತು ಸಾಧ್ಯತೆಗಳನ್ನು ಎತ್ತಿ ತೋರಿಸಿದೆ’ ಎನ್ನುತ್ತಾರೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. ಬಂಧಿತ ಆರೋಪಿಗಳ ವಿರುದ್ಧ ದೇಶದ ವಿರುದ್ಧ ಯುದ್ಧ, ಭಯೋತ್ಪಾದನೆ, ಸ್ಫೋಟಕಗಳ ಉಪಯೋಗದಂಥಾ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಒಟ್ಟಿನಲ್ಲಿ, ರಾಮೇಶ್ವರಂ ಕೆಫೆ ಸ್ಫೋಟ ಕೇವಲ ಒಂದು ಘಟನೆ ಅಲ್ಲ. ಇದು ಭಯೋತ್ಪಾದನೆಯು ಸಾಂಪ್ರದಾಯಿಕ ಗಡಿಗಳನ್ನು ದಾಟಿ, ತಂತ್ರಜ್ಞಾನ ಮತ್ತು ಮಾನಸಿಕ ಯುದ್ಧದ ಮೂಲಕ ಹೇಗೆ ಹರಡುತ್ತಿದೆ ಎಂಬುದರ ಸೂಚನೆ..! ಆದರೆ, ಎನ್ಐಎದ ವೇಗವಾದ ಕಾರ್ಯ ವಿಧಾನ ಮತ್ತು ನ್ಯಾಯಾಂಗ ಪ್ರಕ್ರಿಯೆ ಭಾರತದ ಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಹೊಸ ತಲೆಮಾರಿನ ಸ್ಫೋಟಕ ಯೋಜನೆಗಳಿಗೆ ಬೆಂಗಳೂರು ‘ಸಿಲಿಕಾನ್ ಶೀಲ್ಡ್’ಆಗಬೇಕಿದೆ.