ಹೆತ್ತವರ ನೂರು ಕನಸುಗಳು, ಇನ್ನೇನು ಎರಡೇ ವರ್ಷದಲ್ಲಿ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಎಂಬ ಆಸೆ, ಎಲ್ಲವೂ ಈಗ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ 23 ವರ್ಷದ ವಿದ್ಯಾರ್ಥಿನಿ ಯಶಸ್ವಿನಿ ತನ್ನ ಚಂದಾಪುರದ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಕಾಲೇಜು ಉಪನ್ಯಾಸಕರ ಕಿರುಕುಳವೇ ಇದಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರಿಮಳ ಮತ್ತು ಭೋದೆವಯ್ಯ ದಂಪತಿಯ ಏಕೈಕ ಪುತ್ರಿ ಯಶಸ್ವಿನಿ, ಡೆಂಟಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಯಶಸ್ವಿನಿ, ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಗುರಿ ಹೊಂದಿದ್ದರು. ಆದರೆ ಬುಧವಾರ ಕಣ್ಣು ನೋವಿನ ಕಾರಣದಿಂದ ಅವರು ಕಾಲೇಜಿಗೆ ರಜೆ ಹಾಕಿದ್ದರು. ಗುರುವಾರ ಕಾಲೇಜಿಗೆ ಹೋದಾಗ ಉಪನ್ಯಾಸಕರು ಎಲ್ಲ ಸಹಪಾಠಿಗಳ ಮುಂದೆ ಆಕೆಯನ್ನು ಅತ್ಯಂತ ಹೀನಾಯವಾಗಿ ನಿಂದಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೆಕ್ಚರರ್ ನೀಡಿದ ಟಾರ್ಚರ್ ಏನು?
ತಾಯಿ ಪರಿಮಳ ಅವರ ಆರೋಪದ ಪ್ರಕಾರ, ಕಾಲೇಜಿನಲ್ಲಿ ಯಶಸ್ವಿನಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. “ಕಣ್ಣು ನೋವಿಗೆ ಯಾವ ಡ್ರಾಪ್ಸ್ ಹಾಕಿದ್ದೆ? ಎಷ್ಟು ಡ್ರಾಪ್ಸ್ ಹಾಕಿದ್ದೆ? ಇಡೀ ಬಾಟಲ್ ಸುರಿದುಕೊಂಡಿದ್ದೀಯಾ?” ಎಂದು ಲೆಕ್ಚರರ್ ಸಹಪಾಠಿಗಳ ಮುಂದೆ ಅಣಕವಾಡಿದ್ದಾರೆ. ಅಷ್ಟೇ ಅಲ್ಲದೆ, ಶೈಕ್ಷಣಿಕವಾಗಿಯೂ ಆಕೆಗೆ ಅನ್ಯಾಯ ಮಾಡಲಾಗುತ್ತಿತ್ತು ಎಂಬ ಆರೋಪವಿದೆ. ಸೆಮಿನಾರ್ ನೀಡಲು ಅವಕಾಶ ನೀಡದಿರುವುದು ಮತ್ತು ರೆಡಿಯಾಲಜಿ ಕೇಸ್‌ಗಳನ್ನು ನೀಡದೆ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ.
ತಾಯಿಯ ಕಣ್ಣೀರು ಮತ್ತು ಆಕ್ರೋಶ:
ಇದ್ದೊಬ್ಬ ಮಗಳನ್ನು ಕಳೆದುಕೊಂಡ ತಾಯಿ ಪರಿಮಳ ಅವರ ಗೋಳಾಟ ನೋಡಲು ಅಸಾಧ್ಯವಾಗಿತ್ತು. “ನನ್ನ ಮಗಳನ್ನು ಡಾಕ್ಟರ್ ಮಾಡಬೇಕೆಂಬ ಕನಸು ನುಚ್ಚುನೂರಾಯಿತು. ಕಾಲೇಜಿನ ಆಡಳಿತ ಮಂಡಳಿ ಮತ್ತು ಕಿರುಕುಳ ನೀಡಿದ ಲೆಕ್ಚರರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಶವಾಗಾರದ ಮುಂದೆ ಜಮಾಯಿಸಿದ ಸ್ನೇಹಿತರು ಮತ್ತು ಕುಟುಂಬಸ್ಥರು ಯಶಸ್ವಿನಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜು ಪ್ರಿನ್ಸಿಪಾಲ್ ಮತ್ತು ಸಂಬಂಧಪಟ್ಟ ಉಪನ್ಯಾಸಕರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಕೂಡ ಭೀತಿಯಲ್ಲಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಮಾನಸಿಕ ಕಿರುಕುಳಗಳು ಕೊನೆಯಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.
ಒಂದು ಜೀವ ಹೋಗಿದೆ, ಒಂದು ಕುಟುಂಬ ಬೀದಿಗೆ ಬಿದ್ದಿದೆ. ಶಿಕ್ಷಣ ನೀಡಬೇಕಾದ ಗುರುಗಳೇ ಸಾವು ನೋವಿಗೆ ಕಾರಣರಾದರೆ ವಿದ್ಯಾರ್ಥಿಗಳ ಭವಿಷ್ಯವೇನು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.





