ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಬಳ್ಳಾರಿ ವಲಯ ಕಚೇರಿಯ ಬ್ಯಾಂಕ್ ಖಾತೆಯಿಂದ ಸುಮಾರು ₹16.17 ಕೋಟಿ ಹಣವನ್ನು ನಕಲಿ ಸಹಿಗಳು ಮತ್ತು ಸೀಲ್ ಬಳಸಿ ವಂಚಿಸಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವಂಚನೆಯು 2022 ಅಕ್ಟೋಬರ್ 15ರಿಂದ 2026 ಫೆಬ್ರವರಿ 20ರವರೆಗೆ ನಡೆದಿದ್ದು, ಆಂತರಿಕ ಲೆಕ್ಕಪರಿಶೋಧನೆಯ ವೇಳೆ ಬೆಳಕಿಗೆ ಬಂದಿದೆ. ಮಾರ್ಚ್ 11ರಂದು ವರದಿ ಪರಿಶೀಲನೆ ಸಮಯದಲ್ಲಿ ಈ ಅವ್ಯವಹಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕೆಐಎಡಿಬಿ ಬಳ್ಳಾರಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ಎಂ. ಕೊಳಲಗಿ ಅವರು ನೀಡಿದ ದೂರಿನ ಮೇರೆಗೆ ಬಳ್ಳಾರಿ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪ್ರಮುಖ ಆರೋಪಿಗಳು ಗುತ್ತಿಗೆ ನೌಕರ ಸಂತೋಷ್ ಕುಮಾರ್ (ಮುಖ್ಯ ಕಿಂಗ್‌ಪಿನ್ ಎಂದು ಆರೋಪ)ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಮ್ಯಾನೇಜರ್, ನಜೀರ್ ಅಹ್ಮದ್, ಶ್ರುತಿ, ಆಯಿಷಾ, ರಾಕೇಶ್, ವಿದ್ಯಾಲಕ್ಷ್ಮಿ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ನಕಲಿ ಸಹಿಗಳು, ಸೀಲ್ ಬಳಸಿ KIADB ಖಾತೆಯಿಂದ ಹಣವನ್ನು ಸಂಬಂಧವಿಲ್ಲದ ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆ ಮಾಡಿ, ನಂತರ ಹಣವನ್ನು ವಿತ್‌ಡ್ರಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಂಚನೆಯು ಮೂವರು ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳ ಕಾಲಘಟ್ಟದಲ್ಲಿ ನಡೆದಿದ್ದು, ಹಣವು ಮುಖ್ಯವಾಗಿ ಸಂತೋಷ್ ಕುಮಾರ್ ಅವರ ಖಾತೆಗೆ ವರ್ಗಾವಣೆಯಾಗಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ವಂಚನೆಯ ಮೊತ್ತ 15 ಕೋಟಿಗೂ ಹೆಚ್ಚಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತನಿಖೆ ಮುಂದುವರಿದಿದ್ದು, ಹೆಚ್ಚಿನ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.
ಈ ಘಟನೆಯು ಕರ್ನಾಟಕದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಹಣಕಾಸು ಅವ್ಯವಹಾರಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ.





