ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಯಲ್ಲಿ ಹೊರಬಂದ ಮಹತ್ವದ ಸತ್ಯಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಮಾಧ್ಯಮದ ಮುಂದಿಟ್ಟಿದ್ದಾರೆ.
ಎಸ್ಪಿ ಸಿದ್ಧಾರ್ಥ್ ಗೋಯಲ್ ಹೇಳಿದ್ದೇನು?
- ಘಟನೆಯಲ್ಲಿ ಒಬ್ಬನೇ ವ್ಯಕ್ತಿ (ನವನಗರ ನಿವಾಸಿ ತನ್ವೀರ್) ಕಲ್ಲು ಎಸೆದಿದ್ದಾನೆ ಎಂದು ಆತನೇ ಒಪ್ಪಿಕೊಂಡಿದ್ದಾನೆ.
- ಸಿಸಿಟಿವಿ ದೃಶ್ಯಗಳ ಪರಿಶೀಲನೆಯಿಂದ ಇನ್ನೂ 7 ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ.
- ಗಲಾಟೆ ಪೂರ್ವ ಯೋಜಿತವಾಗಿರಲಿಲ್ಲ ಮತ್ತು ಡಿಜೆ ವಿಚಾರಕ್ಕೆ ಸಂಬಂಧಿಸಿದ್ದಲ್ಲ.
- ರಾತ್ರಿ ಸುಮಾರು 10:06ಕ್ಕೆ ಘಟನೆ ನಡೆದಿದ್ದು, ಎಸ್ಪಿ ಸೇರಿದಂತೆ ಇಬ್ಬರು ಕಾನ್ಸ್ಟೇಬಲ್‌ಗಳಿಗೆ ಗಾಯಗಳಾಗಿವೆ.
- ಕಲ್ಲು ತೂರಾಟದ ಜೊತೆಗೆ ಚಪ್ಪಲಿಗಳನ್ನೂ ಎಸೆಯಲಾಗಿದೆ.
- ಮಸೀದಿಯ ಶೂ ರ್ಯಾಕ್‌ನಲ್ಲಿದ್ದ ಕಲ್ಲುಗಳನ್ನು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ರಾಡ್ ಅಥವಾ ಯಾವುದೇ ಅಸ್ತ್ರಗಳಿರಲಿಲ್ಲ.
- ಘಟನೆ ಹಿನ್ನೆಲೆಯಲ್ಲಿ ಬಿಎನ್‌ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
- ಸುಮೋಟೋ ಕೇಸ್ ದಾಖಲಿಸಿ FIR ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಬುಧವಾರ ಸಂಜೆ ನಡೆದ ಈ ಘಟನೆಯಲ್ಲಿ ಮೆರವಣಿಗೆ ಪಂಕಾ ಮಸೀದಿ ಬಳಿ ಹಾದು ಹೋಗುತ್ತಿದ್ದಾಗ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆದಿತ್ತು. ಘಟನೆಯಿಂದ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ಪ್ರಕರಣದ ನಂತರ ನಗರದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರು ಸಿಸಿಟಿವಿ ಫುಟೇಜ್ ಪರಿಶೀಲನೆ ಮಾಡಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಯಾವುದೇ ಪೂರ್ವ ಯೋಜಿತ ಉದ್ದೇಶವಿರಲಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.





