ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬೆಂಗಳೂರಿಗೆ ಭೇಟಿ ನೀಡಿದ್ದು, ಇಲ್ಲಿ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆಗೆ ತೆರಳಿ ದೋಸೆ ಸವಿದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅಖಿಲೇಶ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದ ನೆನಪು, ಸ್ವಾದದ ಹಳೆಯ ಸಂಬಂಧ” ಎಂದು ಮುದ್ದಾದ ಕ್ಯಾಪ್ಷನ್ ಬರೆದಿದ್ದಾರೆ.
ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅಖಿಲೇಶ್ ಅವರು ರಾಮೇಶ್ವರಂ ಕೆಫೆಯ ಜನಪ್ರಿಯ ಗೀ ಪಾಡ್ ದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, “ಅಖಿಲೇಶ್ ಯಾದವ್ ಈಗ ಸೌತ್ ಇಂಡಿಯನ್ ಫುಡ್ ಫ್ಯಾನ್ ಆದ್ರು” ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಅಖಿಲೇಶ್‌ಗೆ ಇಂಡಿಯಾ ಮೈತ್ರಿಕೂಟದ ಜವಾಬ್ದಾರಿ ಬೇಕು? ಇದೇ ಸಮಯದಲ್ಲಿ ಸಮಾಜವಾದಿ ಪಕ್ಷದ ಹಿರಿಯ ಶಾಸಕ ರವಿದಾಸ್ ಮೆಹ್ರೋತ್ರಾ ಅವರು “ರಾಹುಲ್ ಗಾಂಧಿ ಬದಲು ಅಖಿಲೇಶ್ ಯಾದವ್ ಅವರೇ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬೇಕು” ಎಂದು ಆಗ್ರಹಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ಐಎನ್‌ಡಿಐಎ ಬಣದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 37 ಸ್ಥಾನ ಗೆದ್ದು ಕಾಂಗ್ರೆಸ್ ನಂತರ ಲೋಕಸಭೆಯಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲೇಶ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂಬ ಬೇಡಿಕೆ ಗಟ್ಟಿಯಾಗಿದೆ.
ಅಖಿಲೇಶ್ ಯಾದವ್ ಈ ಹಿಂದೆಯೂ ಇವಿಎಂ ವಿರುದ್ಧ ಧ್ವನಿ ಎತ್ತಿದ್ದು, ಬ್ಯಾಲೆಟ್ ಮತದಾನಕ್ಕೆ ಮರಳಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಈಗ ಬೆಂಗಳೂರಿನ ದೋಸೆ ಸವಿದ ನಂತರ ಅಖಿಲೇಶ್ ಅವರ ಜನಪ್ರಿಯ ದಕ್ಷಿಣ ಭಾರತದಲ್ಲೂ ಹೆಚ್ಚುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ.





