ಕನ್ನಡ ಕಲಾಭಿಮಾನಿಗಳ ಜೊತೆ ದೊಡ್ಮನೆ ಅಭಿಮಾನಿ ದೇವರುಗಳಿಗೆ ಡಬಲ್ ಧಮಾಕ. ಅಣ್ಣಾವ್ರ ಮೊಮ್ಮಕ್ಕಳು ಅಭಿನಯದ ಎರಡೆರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗಪ್ಪಳಿಸುತ್ತಿವೆ. ಯುವ-ವಿನಯ್ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಬಾರದು ಅಂತ ಒಂದು ತಿಂಗಳ ಅಂತರದಲ್ಲಿ ಬೆಳ್ಳಿತೆರೆ ಬೆಳಗುತ್ತಿವೆ.
ಎಕ್ಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರೋ ಸಿನಿಮಾ. ಯುವರಾಜ್‌ಕುಮಾರ್ ಯುವ ಚಿತ್ರದ ಬಳಿಕ ನಟಿಸ್ತಿರೋ ಎರಡನೇ ಸಿನಿಮಾ. ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾಗೆ ಮೂರು ಬ್ಯಾನರ್‌ಗಳಿಂದ ಬರೋಬ್ಬರಿ ಐದು ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ಹೌದು.. ಯುವಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಜಯಣ್ಣ-ಭೋಗೇಂದ್ರ ಹಾಗೂ ಕಾರ್ತಿಕ್ ಗೌಡ- ಯೋಗಿ ಜಿ ರಾಜ್ ಸಾಥ್ ನೀಡಿದ್ದಾರೆ.
ಪಕ್ಕಾ ಲೋಕಲ್ ಫ್ಲೇವರ್‌ನಲ್ಲಿರೋ ಈ ಸಿನಿಮಾ ರಾ ಅಂಡ್ ರಗಡ್ ಆಗಿ ತಯಾರಾಗಿದ್ದು, ಇಲ್ಲಿ ಯೂತ್‌ಫುಲ್ ಕಂಟೆಂಟ್ ಮಸ್ತಾಗಿದೆ. ಯುವ ಜೊತೆ ಸಂಜನಾ ಹಾಗೂ ಸಂಪದ ಅನ್ನೋ ಇಬ್ಬರು ನಾಯಕಿಯರಿದ್ದು, ಟೀಸರ್ ಜೊತೆ ಸಾಂಗ್ಸ್ ಎಲ್ಲರೂ ಗುನುಗುವಂತಾಗಿವೆ. ಚಿತ್ರದ ಪ್ರಮೋಷನ್ಸ್ ಕೂಡ ಭರ್ಜರಿಯಾಗಿ ನಡೆಸ್ತಿರೋ ಟೀಂ, ಸಿನಿಮಾನ ಇದೇ ಜುಲೈ 18ಕ್ಕೆ ಗ್ರ್ಯಾಂಡ್ ಆಗಿ ತೆರೆ ಮೇಲೆ ತರೋಕೆ ಸಜ್ಜಾಗಿದೆ.
ಇನ್ನೂ ತಮ್ಮ ಯುವರಾಜ್‌ಕುಮಾರ್ ಎಕ್ಕ ಸಿನಿಮಾ ಜುಲೈ 18ಕ್ಕೆ ರಿಲೀಸ್ ಆದ್ರೆ, ಆಗಸ್ಟ್‌ನಲ್ಲಿ ತನ್ನ ಅಂದೊಂದಿತ್ತು ಕಾಲ ಸಿನಿಮಾನ ಚಿತ್ರಪ್ರೇಮಿಗಳ ಮುಂದೆ ತರೋಕೆ ಸಜ್ಜಾಗಿದ್ದಾರೆ ಅಣ್ಣ ವಿನಯ್ ರಾಜ್‌ಕುಮಾರ್. ಯೆಸ್.. ಕೀರ್ತಿ ನಿರ್ದೇಶನದ ಯೂತ್‌ಫುಲ್ ಪ್ರೇಮ್ ಕಹಾನಿ ಅಂದೊಂದಿತ್ತು ಕಾಲ, ಆಗಸ್ಟ್ 29ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಸುರೇಶ್ ನಿರ್ಮಾಣದ ಈ ಚಿತ್ರ ಸಾಂಗ್ಸ್ ಹಾಗೂ ಟೀಸರ್ ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.\
ಕಾಕತಾಳೀಯ ಅಂದ್ರೆ ವಿನಯ್ ರಾಜ್ ಕೂಡ ಒಬ್ಬರಲ್ಲ ಇಬ್ಬಿಬ್ಬರ ಜೊತೆ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ. ಅದಿತಿ ಪ್ರಭುದೇವ ಹಾಗೂ ನಿಶಾ ರವಿಕೃಷ್ಣನ್ ಹೀಗೆ ಇಬ್ಬರು ಚೆಂದುಳ್ಳಿ ಚೆಲುವೆಯರು ಸಿನಿಮಾದ ಗ್ಲಾಮರ್ ಹೆಚ್ಚಿಸಲಿದ್ದಾರೆ. ಸದ್ಯ ಇತ್ತೀಚೆಗೆ ರಿಲೀಸ್ ಆದ ಅರೇ ಅರೇ ಯಾರೋ ಇವಳು ಸಾಂಗ್ ಕಣ್ಮನ ತಣಿಸುತ್ತಿದೆ.\