‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭಾರೀ ಅವಘಡ: ಸೌಂಡ್ ಬಾಕ್ಸ್ ಬಿದ್ದು ಅಭಿಮಾನಿಗಳಿಗೆ ಗಾಯ

Untitled design 2026 08 23T113822.371

ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅನಾಹುತವೊಂದು ಸಂಭವಿಸಿದೆ. ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ವೇಳೆ ಸೌಂಡ್ ಬಾಕ್ಸ್ ಹಾಗೂ ಲೈಟಿಂಗ್ ಸೆಟಪ್ ಕುಸಿದು ಬಿದ್ದ ಪರಿಣಾಮ ಕೆಲವು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಗಾಯಗೊಂಡಿದ್ದಾರೆ. ಯಶ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಕಾರ್ಯಕ್ರಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೈದರಾಬಾದ್‌ನಲ್ಲಿ ಭರ್ಜರಿ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಯಶ್ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದರು. ವೇದಿಕೆಯ ಸುತ್ತಮುತ್ತಲೂ ಅಭಿಮಾನಿಗಳಿಂದ ಭಾರಿ ಜನಸ್ತೋಮ ಸೇರಿತ್ತು.

ಯಶ್ ಮಾತನಾಡುತ್ತಿದ್ದಾಗಲೇ ಅವಘಡ

ಯಶ್ ಅವರು ವೇದಿಕೆ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸ್ಟೇಜ್ ಸಮೀಪದಲ್ಲಿದ್ದ ಬೃಹತ್ ಸೌಂಡ್ ಬಾಕ್ಸ್ ಹಾಗೂ ಫ್ಲಡ್‌ಲೈಟ್ ಕಂಬವೊಂದು ಕುಸಿದು ಬಿದ್ದಿದೆ. ವೇದಿಕೆಯ ಸಮೀಪದಲ್ಲಿ ನಿಂತಿದ್ದ ಕೆಲವು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಈ ಘಟನೆಯಿಂದ ಗಾಯಗೊಂಡಿದ್ದಾರೆ.

ಅವಘಡ ಸಂಭವಿಸುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದವರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡವರಲ್ಲಿ ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ವರದಿಯಾಗಿದೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಗಾಯಗೊಂಡವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದ್ದರೂ, ಘಟನೆ ಬಳಿಕ ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ತಕ್ಷಣವೇ ಮಾತು ನಿಲ್ಲಿಸಿದ ಯಶ್

ಅವಘಡ ಸಂಭವಿಸುತ್ತಿದ್ದಂತೆಯೇ ವೇದಿಕೆ ಮೇಲಿದ್ದ ಯಶ್ ಅವರು ತಮ್ಮ ಮಾತನ್ನು ನಿಲ್ಲಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳ ಕ್ಷೇಮ ವಿಚಾರಿಸಿದ ಅವರು, ಸ್ಥಳದಲ್ಲಿದ್ದವರು ಆತಂಕಕ್ಕೆ ಒಳಗಾಗದೆ ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರುವಂತೆ ಯಶ್ ಸೂಚಿಸಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಆಯೋಜಕರಿಂದ ಮಾಹಿತಿ ಪಡೆದುಕೊಂಡು, ಗಾಯಗೊಂಡವರಿಗೆ ಅಗತ್ಯ ನೆರವು ದೊರೆಯುವಂತೆ ನೋಡಿಕೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯ ಬೆನ್ನಲ್ಲೇ ಕಾರ್ಯಕ್ರಮದ ಭದ್ರತಾ ವ್ಯವಸ್ಥೆ ಹಾಗೂ ಜನಸಂದಣಿ ನಿಯಂತ್ರಣದ ಕುರಿತು ಪ್ರಶ್ನೆಗಳು ಎದ್ದಿವೆ. ವೇದಿಕೆಯ ಸಮೀಪಕ್ಕೆ ತೆರಳಲು ಕೆಲವು ವಿದ್ಯಾರ್ಥಿಗಳು ಸೌಂಡ್ ಬಾಕ್ಸ್ ಮತ್ತು ಇತರ ಉಪಕರಣಗಳನ್ನು ಅಳವಡಿಸಿದ್ದ ಕಂಬಗಳನ್ನು ಹತ್ತಲು ಪ್ರಯತ್ನಿಸಿದ್ದೇ ಘಟನೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆ ಪೊಲೀಸರು ಅಭಿಮಾನಿಗಳನ್ನು ಹಿಂದೆ ಸರಿಯುವಂತೆ ಸೂಚಿಸಿದ್ದರು ಎನ್ನಲಾಗಿದೆ. 

‘ಟಾಕ್ಸಿಕ್’ ಮೇಲೆ ಭಾರಿ ನಿರೀಕ್ಷೆ

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.

ಆಗಸ್ಟ್ 26ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಬಿಡುಗಡೆಗೆ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Exit mobile version