ಮಾಸ್ ಅಂದ್ರೆ ಬರಿ ಅಬ್ಬರ ಅಲ್ಲ, ಅದು ಬ್ರಿಟಿಷರ ಎದೆ ನಡುಗಿಸೋ ರಣಕಹಳೆ. ರೌಡಿ ಬಾಯ್ ವಿಜಯ್ ದೇವರಕೊಂಡ ಹಾಗೂ ಕನ್ನಡಿಗರ ನೆಚ್ಚಿನ ರಶ್ಮಿಕಾ ಮಂದಣ್ಣ ಮದುವೆಯಾದ್ಮೇಲೆ ಬಿಗ್ ಸ್ಕ್ರೀನ್‌ಗೆ ತಂದಿರೋ ಅಸಲಿ ಧಮಾಕಾ ಅಂದ್ರೆ ‘ರಣಬಾಲಿ’. ಸದ್ಯ ರಿಲೀಸ್ ಆಗಿರೋ ಈ ಸಿನಿಮಾದ 3 ನಿಮಿಷ 56 ಸೆಕೆಂಡ್‌ಗಳ ಟ್ರೇಲರ್ ಈಗ ನಡುಕ ಹುಟ್ಟಿಸಿದೆ. ಬ್ರಿಟಿಷರ ಅಟ್ಟಹಾಸಕ್ಕೆ ಕನ್ನಡಿ ಹಿಡಿದು, ಜನರ ರಕ್ತ ಕುದಿಯುವಂತೆ ಮಾಡಿರೋ ಈ ಪಕ್ಕಾ ರಗಡ್ ರಣರಂಗದ ಕಂಪ್ಲೀಟ್ ಮಾಸ್ ರಿಪೋರ್ಟ್ ಇಲ್ಲಿದೆ ನೋಡಿ.
- ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ
- ಮದುವೆ ಬಳಿಕ ವಿಜಯ್-ರಶ್ಮಿಕಾ ಜೋಡಿಯ ಮೊದಲ ಸಿನಿಮಾ!
- ರಣಬಾಲಿ ರಣರಂಗದಲ್ಲಿ ರಶ್ಮಿಕಾ ಮಂದಣ್ಣ ಸ್ವೀಟ್ ಟಚ್..!
- ಭಾರತೀಯರ ಮೇಲೆ ಬ್ರಿಟಿಷರ ದೌರ್ಜನ್ಯಕ್ಕೆ ರಣಬಾಲಿ ಸಾಕ್ಷಿ
ಸಾಮಾನ್ಯವಾಗಿ ಟ್ರೇಲರ್ ಅಂದ್ಮೇಲೆ ಹೀರೋಗಾಗಿ ಮಾಸ್ ಬಿಜಿಎಂ, ಸಿಟಿ ಹೊಡೆಯೋ ಎಂಟ್ರಿ ಇರುತ್ತೆ. ಆದ್ರೆ ರಣಬಾಲಿಯಲ್ಲಿ ರಾಹುಲ್ ಸಾಂಕೃತ್ಯನ್ ಆಡಿದ್ದು ಬೇರೆಯದ್ದೇ ಗೇಮ್. ಗುಹೆಯ ಮುಂದೆ ಹುಟ್ಟೋ ಮಗುವಿಗೆ ಅಘೋರಿಯೊಬ್ಬ ‘ರಣಬಾಲಿ’ ಅಂತ ಹೆಸರಿಡೋ ಜಾನಪದ ಹಾಡಿನ ಮೂಲಕ ಶುರುವಾಗೋ ಈ ಟ್ರೇಲರ್, ಆಮೇಲೆ ನೇರವಾಗಿ ಬ್ರಿಟಿಷರ ಕರಾಳ ಅಟ್ಟಹಾಸದ ಕಡೆಗೆ ಕರೆದೊಯ್ಯುತ್ತೆ. ನಮ್ಮ ಜನರನ್ನು ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದ ಬ್ರಿಟಿಷರ ಕ್ಷಾಮ ಮತ್ತು ದೌರ್ಜನ್ಯದ ದೃಶ್ಯಗಳನ್ನು ನೋಡಿದ್ರೆ ಯಾರ ರಕ್ತನಾದರೂ ಕುದಿಯಲೇಬೇಕು.
ಈ ಕರಾಳ ಶೋಷಣೆಯ ವಿರುದ್ಧ ಸಿಡಿದೆದ್ದು ನಿಲ್ಲೋದೇ ‘ಸಿಂಗನಮಲ ಬೊಬ್ಬಿಲಿ ರಣಬಾಲಿ’. ವಿಜಯ್ ದೇವರಕೊಂಡ ರಾಯಲಸೀಮಾ ಶೈಲಿಯ ಖಡಕ್ ತೆಲುಗು ಡೈಲಾಗ್ ಹೊಡೆಯುತ್ತಾ, ರಗಡ್ ಲುಕ್‌ನಲ್ಲಿ ಬ್ರಿಟಿಷರ ಮೇಲೆರಗಿದ್ರೆ ಥಿಯೇಟರ್‌ನಲ್ಲಿ ವಿಸಿಲ್ ಬೀಳೋದು ಗ್ಯಾರಂಟಿ. ಕೊಂಚ ಡ್ರಾಮ್ಯಾಟಿಕ್ ಅನಿಸಿದರೂ, ಹಳ್ಳಿಯ ನೈಜ ಹೋರಾಟಗಾರನಾಗಿ ವಿಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ‘ಕಾಂತಾರ’ ಮತ್ತು ‘ಪುಷ್ಪ’ ಶೈಲಿಯಲ್ಲಿ ಕಟ್ ಆಗಿರೋ ಈ ಟ್ರೇಲರ್‌ನಲ್ಲಿ ರೌಡಿ ಬಾಯ್ ಲುಕ್ ನಿರೀಕ್ಷೆಯನ್ನು ಬೆಟ್ಟದಷ್ಟಾಗಿಸಿದೆ.
ಇನ್ನು ಈ ರಣಕಹಳೆಯ ನಡುವೆ ಸ್ವೀಟ್ ಟಚ್ ಕೊಟ್ಟಿರೋದು ಮತ್ಯಾರೂ ಅಲ್ಲ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ವಿಜಯ್ ಅವರ ಪತ್ನಿ ‘ಜಯಮ್ಮ’ ಆಗಿ ಮಿಂಚಿರೋ ರಶ್ಮಿಕಾ, ಮದುವೆಯ ಹೊಸದ್ರಲ್ಲಿ ಗಂಡನಿಂದ ಕದ್ದುಮುಚ್ಚಿ ಓಡೋ ನಟನೆಯಲ್ಲಾಗಲಿ, ಮುಗ್ಧತೆಯಿಂದ ಕೂಡಿರೋ ರಗಡ್ ಸ್ವಭಾವದಲ್ಲಾಗಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ರಿಯಲ್ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಿಡುಗಡೆಯಾಗುತ್ತಿರೋ ಮೊದಲ ಸಿನಿಮಾವಾಗಿದ್ದರಿಂದ, ತೆರೆಮೇಲೆ ಈ ಜಂಟಿಯ ರೊಮ್ಯಾಂಟಿಕ್ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಈ ಕಥೆಗೆ ಜೀವ ತುಂಬಿರೋದು ಬರಿ ನಟರಷ್ಟೇ ಅಲ್ಲ, ರಾಹುಲ್ ಸಾಂಕೃತ್ಯನ್ ಅವರ ಮೇಕಿಂಗ್ ಮತ್ತು ಬಿಗ್ ಸೆಟ್‌ಗಳು. ಜಾನಪದ ಸೊಗಡು, ಕಣ್ಣಿಗೆ ಮುದ ನೀಡೋ ಗ್ರಾಂಡ್ ವಿಶುವಲ್ಸ್, ಅರ್ನಾಲ್ಡ್ ವೋಸ್ಲೂ ಅವರ ಖಡಕ್ ವಿಲನ್ ಅವತಾರ ಮತ್ತು ಅಜಯ್-ಅತುಲ್ ಅವರ ಬಿಜಿಎಂ ಟ್ರೇಲರ್‌ನ ಪ್ರಾಣ. ಈಗಾಗಲೇ ‘ಏಂದಯ್ಯ ಸ್ವಾಮಿ’ ಸಾಂಗ್ ಧೂಳೆಬ್ಬಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ನಿರ್ಮಿಸಿರೋ ಈ ಅದ್ಧೂರಿ ಚಿತ್ರ ಬ್ರಿಟಿಷ್ ಕಾಲದ ನೈಜ ಇತಿಹಾಸವನ್ನು ತೆರೆದಿಡಲು ಸಜ್ಜಾಗಿದೆ.
ಸಾಲು ಸಾಲು ಹಿನ್ನಡೆಯಿಂದ ಕಂಗೆಟ್ಟಿರೋ ವಿಜಯ್ ದೇವರಕೊಂಡಗೆ ಈ ಸಿನಿಮಾ ಪಕ್ಕಾ ಕಂಬ್ಯಾಕ್ ತಂದುಕೊಡೋ ಲಕ್ಷಣ ಕಾಣಿಸ್ತಿದೆ. ಬ್ರಿಟಿಷರ ವಿರುದ್ಧ ರಣಬಾಲಿ ನಡೆಸೋ ಈ ಐತಿಹಾಸಿಕ ಕಾಳಗ ಚಿತ್ರಮಂದಿರಗಳಲ್ಲಿ ಕಿಚ್ಚು ಹಚ್ಚುತ್ತಾ? ವಿಜಯ್-ರಶ್ಮಿಕಾ ಜೋಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಸುತ್ತಾ? ಅನ್ನೋದನ್ನ ತಿಳಿಯಲು ಅಕ್ಟೋಬರ್ 16 ರವರೆಗೆ ಕಾಯಲೇಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
