ಯಶ್ ರೆಮ್ಯುನರೇಷನ್ ಗುಟ್ಟು ರಟ್ಟು..ನಷ್ಟ ಆದ್ರೂ ಜೊತೆಗೆ ನಿಲ್ತಾರೆ ಅಣ್ತಮ್ಮ

ಯಶ್ ಸಿನಿಮಾಗಳ ಬಿಸಿನೆಸ್ ಮಾಸ್ಟರ್‌ಪ್ಲಾನ್ ಏನು..?

ರೆಮ್ಯುನರೇಷನ್

ನಟನಾಗಿ ಮಾತ್ರವಲ್ಲ, ನಿರ್ಮಾಪಕನಾಗಿಯೂ ಯಶ್ ಹೇಗೆ ಜವಾಬ್ದಾರಿ ತಗೋತಾರೆ ಗೊತ್ತಾ..? ಕೆಜಿಎಫ್‌ಗೂ ಮುಂಚೆಯೇ ಯಶ್ ಪ್ಲಾನ್ ಮಾಡಿದ್ದ ಆ ಬಿಸಿನೆಸ್ ಪ್ಲಾನ್ ಏನು? ‘ಆಪ್ ಕೀ ಅದಾಲತ್’ ಶೋನಲ್ಲಿ ತಮ್ಮ ಸಂಭಾವನೆ ಮತ್ತು ಲಾಭದ ಸೀಕ್ರೆಟ್ ಬಿಚ್ಚಿಟ್ಟ ರಾಕಿ ಭಾಯ್.

ಸಿನಿಜಗತ್ತಿನಲ್ಲಿ ಯಶ್ ಸೃಷ್ಟಿಸಿರೋ ಕ್ರೇಜ್ ಸಣ್ಣದೇನೂ ಅಲ್ಲ. ಕೇವಲ ಒಬ್ಬ ನಟನಾಗಿ ಕೊಟ್ಟಷ್ಟು ಸಂಭಾವನೆ ಜೇಬಿಗಿಳಿಸಿಕೊಂಡು ಸೈಲೆಂಟ್ ಆಗೋದು ಯಶ್ ಶೈಲಿಯೇ ಅಲ್ಲ. ಚಿತ್ರದ ಲಾಭ ಮತ್ತು ನಷ್ಟ ಎರಡರಲ್ಲೂ ನೇರ ಪಾಲುದಾರರಾಗುವ ಮೂಲಕ ತಮ್ಮ ಸಿನಿಮಾಗಳ ಬಿಸಿನೆಸ್ ಸಾಮ್ರಾಜ್ಯಕ್ಕೆ ಭದ್ರಬುನಾದಿ ಹಾಕಿದ್ದಾರೆ. ಇತ್ತೀಚೆಗೆ ಪ್ರಸಿದ್ಧ ‘ಆಪ್ ಕೀ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಕೋಟಿ ಕೋಟಿ ಸಂಭಾವನೆ ಹಾಗೂ ನಿರ್ಮಾಪಕನಾಗಿ ಲಾಭ ಗಳಿಸುವ ಮಾಸ್ಟರ್‌ಪ್ಲಾನ್ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟರು ಪ್ರತಿ ಸಿನಿಮಾಗೆ ಸಂಭಾವನೆ ಪಡೆದು ನಿರ್ಮಾಪಕರ ಜೇಬಿಗೆ ಕತ್ತರಿ ಹಾಕುತ್ತಾರೆ ಅನ್ನೋ ಮಾತಿದೆ. ಆದರೆ ಯಶ್‌ ಮಾದರಿಯೇ ಬೇರೆ “ನಾನು ಎಂದಿಗೂ ಕೇವಲ ಅಡ್ವಾನ್ಸ್ ಹಣ ಪಡೆದು ನಿರ್ಮಾಪಕರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವುದಿಲ್ಲ. ಸಿನಿಮಾ ಗೆದ್ದರೆ ಒಟ್ಟಿಗೆ ಲಾಭ ಪಡೆಯಬೇಕು, ಒಂದು ವೇಳೆ ನಷ್ಟ ಬಂದರೂ ಜೊತೆಯಾಗಿಯೇ ನಿಲ್ಲಬೇಕು ಎಂಬುದು ನನ್ನ ಕಟ್ಟುನಿಟ್ಟಿನ ತತ್ವ” ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ‘ಕೆಜಿಎಫ್’ ಸಿನಿಮಾಗೂ ಮುಂಚಿನಿಂದಲೇ ಅವರು ನಿರ್ಮಾಪಕರ ಜೊತೆ ಪ್ರೊಫಿಟ್ ಶೇರಿಂಗ್ ಮಾದರಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಇನ್ನು ಪ್ರತಿಯೊಂದು ಸಿನಿಮಾಗೂ ಯಶ್ ಬರೋಬ್ಬರಿ 50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಸಿನಿರಂಗದಲ್ಲಿದೆ. ಆದರೆ ಅವರು ಕೇವಲ ಒಂದು ಫಿಕ್ಸ್ಡ್ ಅಮೌಂಟ್‌ಗೆ ಸೀಮಿತವಾಗದೆ, ನಿರ್ಮಾಪಕರ ಜೊತೆ ಸೇರಿ ರಿಸ್ಕ್ ತೆಗೆದುಕೊಳ್ಳುವ ತಂತ್ರ ಅನುಸರಿಸುತ್ತಾರೆ. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಸುವ ಜಾದೂ ಮತ್ತು ಕೋಟಿ ಕೋಟಿ ಲಾಭದಲ್ಲೂ ನೇರ ಪಾಲು ಪಡೆಯುವ ಮೂಲಕ ತಮ್ಮ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಟನಾಗಿ ರಿಸ್ಕ್ ತಗೊಂಡು, ಸಿನಿಮಾದ ಗೆಲುವನ್ನೇ ತಮ್ಮ ನಿಜವಾದ ಪ್ರತಿಫಲವನ್ನಾಗಿ ಮಾಡಿಕೊಂಡಿದ್ದಾರೆ.

ಕೇವಲ 80 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ‘ಕೆಜಿಎಫ್’ ಸಿನಿಮಾ ವಿಶ್ವಾದ್ಯಂತ ನೂರಾರು ಕೋಟಿ ಕಲೆಕ್ಷನ್ ಮಾಡಿ ಪ್ರೊಡ್ಯೂಸರ್ಸ್‌ಗೆ ಭಾರಿ ಲಾಭ ತಂದುಕೊಟ್ಟಿತ್ತು. ಈಗ ಅವರ ಮುಂಬರುವ ‘ಟಾಕ್ಸಿಕ್’ ಸಿನಿಮಾ ಬರೋಬ್ಬರಿ 500 ಕೋಟಿಗೂ ಅಧಿಕ ಬೃಹತ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ. ಇದರ ಜೊತೆಗೆ ಭಾರತೀಯ ಚಿತ್ರರಂಗದ ಕನಸಿನ ಯೋಜನೆಯಾದ ‘ರಾಮಾಯಣ’ ಚಿತ್ರಕ್ಕೂ ಯಶ್ ನಟಿಸುವುದಷ್ಟೇ ಅಲ್ಲದೆ,  ಸಹ-ನಿರ್ಮಾಪಕರಾಗಿಯೂ  ಹೆಗಲುಕೊಟ್ಟು ನಿರ್ಮಾಣದ ಹಕ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಭಿಮಾನಿಗಳ ನಂಬಿಕೆಗೆ ಧಕ್ಕೆ ಬಾರದಂತೆ ಗುಣಮಟ್ಟದ ಸಿನಿಮಾಗಳನ್ನು ನೀಡುವುದೇ ತಮ್ಮ ಮುಖ್ಯ ಗುರಿ ಎಂದು ಯಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೋಟಿ ಕೋಟಿ ಸಂಭಾವನೆಯ ಜೊತೆಗೆ ಲಾಭ ಹಂಚಿಕೆ ಮಾದರಿಯಲ್ಲಿ ನಿರ್ಮಾಪಕರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಮೂಲಕ, ತಮ್ಮ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಒಟ್ಟಿನಲ್ಲಿ, ನಟನೆಯ ಜೊತೆಗೆ ಸಿನಿಮಾದ ಪ್ರತಿಯೊಂದು ಬಿಸಿನೆಸ್‌ನಲ್ಲೂ ಸೈಲೆಂಟ್ ಆಗಿ ಮಾಸ್ಟರ್‌ಮೈಂಡ್ ಚಲಾಯಿಸುತ್ತಿರೋದೇ ಯಶ್ ಯಶಸ್ಸಿನ ರಿಯಲ್ ಸೀಕ್ರೆಟ್.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

Exit mobile version