ಬೆಂಗಳೂರು, ಅಕ್ಟೋಬರ್ 03: ರಿಷಬ್ ಶೆಟ್ಟಿ ಅವರ ಅತ್ಯಂತ ನಿರೀಕ್ಷಿತ ಚಲನಚಿತ್ರ ‘ಕಾಂತಾರಾ ಚಾಪ್ಟರ್ 1’ ಅಕ್ಟೋಬರ್ 2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಚರ್ಚೆ ಮತ್ತು ಪ್ರಶಂಸೆಗೆ ಒಳಗಾಗಿದೆ. ಈ ಸಂದರ್ಭದಲ್ಲಿ, ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಯಶ್ ಅವರು ಚಿತ್ರವನ್ನು ವೀಕ್ಷಿಸಿ ತಮ್ಮ ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ‘ಕನ್ನಡ ಮತ್ತು ಭಾರತೀಯ ಸಿನಿಮಾದ ಮೈಲಿಗಲ್ಲು’ ಎಂದು ಬಣ್ಣಿಸಿರುವ ಯಶ್ ಅವರು, ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನಾ ಕೌಶಲ್ಯವನ್ನು ಹಾಗೂ ಹೊಂಬಾಳೆ ಫಿಲ್ಮ್ಸ್‌ನ ಬೆಂಬಲವನ್ನು ಅಭಿನಂದಿಸಿದ್ದಾರೆ.
ಚಿತ್ರವನ್ನು ವೀಕ್ಷಿಸಿದ ಯಶ್, ಇದು ಕನ್ನಡ ಮತ್ತು ಭಾರತೀಯ ಸಿನಿಮಾದ ಬೆಂಚ್‌ಮಾರ್ಕ್ (ಮಾನದಂಡ) ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಅವರ ದೃಢ ಸಂಕಲ್ಪ, ಭಕ್ತಿ, ಸಾಹಸ, ನಂಬಿಕೆ ಮತ್ತು ಶ್ರದ್ಧೆ ಇತ್ಯಾದಿ ಎಲ್ಲವೂ ಚಿತ್ರದ ಪ್ರತಿ ಫ್ರೇಮ್‌ನಲ್ಲಿ ಕಾಣಸಿಗುತ್ತದೆ ಎಂದು ಭಾವನಾತ್ಮಕವಾಗಿ ವ್ಯಕ್ತಪಡಿಸಿದ್ದಾರೆ. ಒಬ್ಬ ಬರಹಗಾರನಾಗಿ, ನಿರ್ದೇಶಕನಾಗಿ ಮತ್ತು ನಟನಾಗಿ ರಿಷಬ್ ಶೆಟ್ಟಿ ಅವರ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ತೆರೆಯ ಮೇಲೆ ನೋಡುವಾಗ ಪ್ರೇಕ್ಷಕರು ತಲ್ಲೀನರಾಗುತ್ತಿದ್ದಾರೆ ಎಂದು ಯಶ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ
Kantara Chapter 1: The New Benchmark for Kannada and Indian Cinema. @shetty_rishab , your conviction, resilience, and sheer devotion are evident in every frame. As the writer, director, and actor, your vision translates into a truly immersive experience on screen.
Heartfelt…
— Yash (@TheNameIsYash) October 3, 2025
ಯಶ್ ಅವರು ಚಿತ್ರದ ಇತರ ತಂತ್ರಜ್ಞರು ಮತ್ತು ನಟರ ಕೆಲಸವನ್ನು ಸಹ ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಅವರ ಅಭಿನಯ, ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಅದ್ಭುತ ಕ್ಯಾಮೆರಾ ಕೆಲಸವನ್ನು ಪ್ರಶಂಸಿಸಿದ್ದಾರೆ. ಇದರ ಜೊತೆಗೆ, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಇಡೀ ತಂಡದ ಸದಸ್ಯರ ಪ್ರದರ್ಶನ ಉತ್ತಮವಾಗಿ ಮೂಡಿಬಂದಿದೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಅಗಲಿದೆ ಕಲಾವಿದ ರಾಕೇಶ್ ಪೂಜಾರಿ ಅವರ ಅದ್ಭುತ ಪ್ರದರ್ಶನಕ್ಕೆ ಸಲಾಂ ಹೇಳಿರುವ ಯಶ್, ಈ ಸಂದರ್ಭದಲ್ಲಿ ಅವರಿಗೆ ಗೌರವ ನಮನವನ್ನೂ ಸಲ್ಲಿಸಿದ್ದಾರೆ.
ದೊಡ್ಡ ಸಿನಿಮಾಗಳನ್ನು ತೆರೆಮೇಲೆ ತರಲು ಹೊಂಬಾಳೆ ಫಿಲ್ಮ್ಸ್ ನೀಡುತ್ತಿರುವ ಪ್ರೋತ್ಸಾಹ ಮತ್ತು ಬೆಂಬಲ ನಿಜಕ್ಕೂ ಕನ್ನಡ ಸಿನಿಮಾಗೆ ಹೊಸ ಮುನ್ನಡೆ ಬರೆದಿದೆ ಎಂದು ಯಶ್ ಅಭಿಪ್ರಾಯ ಪಡೆದಿದ್ದಾರೆ. ಹೊಂಬಾಳೆಯ ಸಹಕಾರ ಮತ್ತು ಬೆಂಬಲದಿಂದ ಕನ್ನಡ ಸಿನಿಮಾ ಹೊಸ ಮೈಲಿಗಲ್ಲು ನಿರ್ಮಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ .