ಕನ್ನಡ್ ಅಲ್ಲ… ಅದು ‘ಕನ್ನಡ’ ರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿದ ರಾಕಿಂಗ್ ಸ್ಟಾರ್ ಯಶ್.ಕಿಚ್ಚ ಸುದೀಪ್ ಹಾದಿಯಲ್ಲಿ ಯಶ್ ಸಾಭಿತುಪಡಿಸಿದ್ದು ಏನು..? ಗಡಿ ದಾಟಿದ್ರು.. ಪ್ಯಾನ್ ಇಂಡಿಯಾ ಸ್ಟಾರ್ಸ್ ಆದ್ರೂ ಕನ್ನಡ ಸೂಪರ್ ಸ್ಟಾರ್ ಗಳ ಕನ್ನಡಾಭಿಮಾನ ಎಷ್ಟಿದೆ..? ಇಲ್ಲಿದೆ ಆ ಕ್ಯೂಟ್ ಮೊಮೆಂಟ್‌ನ ಕಂಪ್ಲೀಟ್ ಡಿಟೇಲ್ಸ್…
- ಕನ್ನಡ್ ಅಲ್ಲ ಕನ್ನಡ.. ಭಾವನೆಗಳನ್ನ ಅರ್ಥ ಮಾಡ್ಕೊಳಿ.. ಬಿಟೌನ್‌ಗೆ ಯಶ್ ಪಾಠ
- ರಾಷ್ಟ್ರೀಯ ವೇದಿಕೆಯಲ್ಲಿ ತಗ್ಗಿಲ್ಲ ಯಶ್ ಕನ್ನಡಾಭಿಮಾನ
- ಕಿಚ್ಚ ಸುದೀಪ್ ಮೆರೆದಿದ್ದ ಸ್ವಾಭಿಮಾನ ನೆನಪಿಸಿದ ಯಶ್..!
- ನಗುಮುಖದಲ್ಲೇ ಕನ್ನಡದ ತಪ್ಪು ಉಚ್ಚಾರಣೆ ತಿದ್ದಿದ ಯಶ್
ಸ್ಯಾಂಡಲ್‌ವುಡ್ ಬ್ರಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ನಟ ರಾಕಿಂಗ್ ಸ್ಟಾರ್ ಯಶ್. ಅವರಿಗೆ ತಮ್ಮ ಮಾತೃಭಾಷೆ ಕನ್ನಡದ ಮೇಲಿರೋ ಗೌರವ, ಪ್ರೀತಿ ಮತ್ತು ಕಾಳಜಿ ಎಷ್ಟಿದೆ ಅನ್ನೋದು ಜಗತ್ತಿಗೇ ಗೊತ್ತಿರೋ ವಿಷಯ. ತಾವು ಎಷ್ಟೇ ದೊಡ್ಡ ಗ್ಲೋಬಲ್ ಸ್ಟಾರ್ ಆದರೂ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡ ಭಾಷೆಯ ಹೆಸರನ್ನು ಯಾರಾದರೂ ತಪ್ಪಾಗಿ ಉಚ್ಚರಿಸಿದರೆ ಯಶ್ ಸುಮ್ಮನೆ ಕೂರೋದೇ ಇಲ್ಲ. ಸಿಟ್ಟು ಮಾಡಿಕೊಳ್ಳದೆ, ಅತ್ಯಂತ ಪ್ರೀತಿಯಿಂದಲೇ ಎದುರಿಗಿದ್ದವರಿಗೆ ಚಾಟಿ ಬೀಸೋದು ರಾಕಿ ಭಾಯ್ ಸ್ಟೈಲ್.
ಇತ್ತೀಚೆಗೆ ದೇಶದ ಅತ್ಯಂತ ಜನಪ್ರಿಯ ಟಿವಿ ಶೋ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದಾಗ ಇಂಥದ್ದೇ ಒಂದು ಪ್ರಸಂಗ ನಡೆಯಿತು. ಕಾರ್ಯಕ್ರಮದ ನಿರೂಪಕ ಹಾಗೂ ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ಯಶ್ ಅವರ ಬಳಿ ಪ್ರಶ್ನೆ ಕೇಳುವ ಭರದಲ್ಲಿ “ನಮ್ಮ ಭಾರತದಲ್ಲಿ ‘ಕನ್ನಡ್’ ಸಿನಿಮಾಗಳು…” ಎಂದು ಉಚ್ಚರಿಸಿದರು. ‘ಕನ್ನಡ್’ ಅನ್ನೋ ಪದ ಕಿವಿಗೆ ಬೀಳುತ್ತಿದ್ದಂತೆ ತಕ್ಷಣವೇ ಮಧ್ಯಪ್ರವೇಶಿಸಿದ ಯಶ್, ನಗುಮುಖದಿಂದಲೇ “ಸರ್… ಅದು ಕನ್ನಡ್ ಅಲ್ಲ, ಕನ್ನಡ” ಎಂದು ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದರು.
ಯಶ್ ಅವರ ಈ ಸಮಯಪ್ರಜ್ಞೆ ಮತ್ತು ಭಾಷಾ ಪ್ರೇಮವನ್ನು ನೋಡಿ ಸ್ವತಃ ರಜತ್ ಶರ್ಮಾ ಅವರೇ ನಗುತ್ತಾ, ಸರಿ… ಕನ್ನಡ ಎಂದು ತಮ್ಮ ಉಚ್ಚಾರಣೆಯನ್ನು ತಕ್ಷಣವೇ ಸರಿಪಡಿಸಿಕೊಂಡರು. ಅಷ್ಟಕ್ಕೇ ನಿಲ್ಲಿಸದ ಯಶ್, ಪ್ರೇಕ್ಷಕರತ್ತ ತಿರುಗಿ ಎಲ್ಲರೂ ಚೆನ್ನಾಗಿ ಕೇಳಿಸಿಕೊಳ್ಳಿ… ಅದು ಕನ್ನಡ್ ಅಲ್ಲ, ಕನ್ನಡ ಎಂದು ನಗುತ್ತಲೇ ಹಿಂದಿಯಲ್ಲಿ ಖಡಕ್ ಆಗಿ ಹೇಳಿದರು. ಜೊತೆಗೆ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಿ ಎಂದು ಪ್ರೀತಿಯಿಂದ ವಿನಂತಿಸಿ, ಇಡೀ ವಾತಾವರಣವನ್ನು ತಿಳಿಗೊಳಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು
ವಿಶೇಷವೆಂದರೆ, ಶೋ ಆರಂಭಕ್ಕೂ ಮುನ್ನವೇ ಯಶ್ ತಮ್ಮ ಸೌಜನ್ಯ ಮೆರೆದಿದ್ದರು. “ನಾವು ಎಲ್ಲಾ ಭಾಷೆಗಳನ್ನೂ ಗೌರವಿಸಬೇಕು. ನಾನು ಹಿಂದಿ ಮಾತನಾಡುವಾಗ ಏನಾದರೂ ಸಣ್ಣಪುಟ್ಟ ತಪ್ಪಿದ್ದರೆ ಕ್ಷಮಿಸಿ” ಎಂದು ವಿನಮ್ರವಾಗಿ ಕೇಳಿಕೊಂಡಿದ್ದರು. ಆದರೆ ಯಶ್ ಅವರ ಅಸ್ಖಲಿತ ಹಿಂದಿ ಮಾತು ಮತ್ತು ಗಂಭೀರ ವ್ಯಕ್ತಿತ್ವಕ್ಕೆ ಸ್ವತಃ ರಜತ್ ಶರ್ಮಾ ಅವರೇ ಪೂರ್ತಿ ಫಿದಾ ಆಗಿಬಿಟ್ಟಿದ್ದರು. ಇನ್ನು ರಾಷ್ಟ್ರೀಯ ಮಟ್ಟದ ದೊಡ್ಡ ವೇದಿಕೆಯಲ್ಲೂ ಕನ್ನಡ ಭಾಷೆಯ ಸರಿಯಾದ ಉಚ್ಚಾರಣೆಗಾಗಿ ಧ್ವನಿ ಎತ್ತಿದ ಯಶ್ ಕಾಳಜಿಗೆ ಇಡೀ ಕನ್ನಡಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳ ಮಳೆ ಹರಿಸುತ್ತಿದ್ದಾರೆ.
ಅಂದಹಾಗೆ, ಉತ್ತರ ಭಾರತದವರಿಗೆ ‘ಕನ್ನಡ’ ಎಂದು ಸರಿಯಾಗಿ ಉಚ್ಚರಿಸಲು ತಿದ್ದಿದ್ದು ಯಶ್ ಮಾತ್ರವಲ್ಲ. ಈ ಹಿಂದೆ ‘ಸೈಮಾ’ ಆವಾರ್ಡ್ಸ್ ವೇದಿಕೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಕನ್ನಡವನ್ನು ತಪ್ಪಾಗಿ ಉಚ್ಚರಿಸಿದಾಗ, “ಇದು ‘ಕನ್ನಡ್’ ಅಲ್ಲವೇ ಅಲ್ಲ, ಗೌರವದಿಂದ ‘ಕನ್ನಡ’ ಅಂತಾನೇ ಕರೆಯಿರಿ” ಎಂದು ವೇದಿಕೆಯಲ್ಲೇ ನೇರವಾಗಿ ಪಾಠ ಹೇಳಿದ್ದರು. ಒಟ್ಟಿನಲ್ಲಿ, ನಮ್ಮ ಕನ್ನಡದ ದಿಗ್ಗಜ ನಟರು ಪರಭಾಷಿಗರ ಎದುರು ನಮ್ಮ ಭಾಷೆಯ ಸ್ವಾಭಿಮಾನದ ಬಾವುಟವನ್ನು ಎಂದಿಗೂ ತಗ್ಗಿಸುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
