ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಕಮೆಂಟ್‌ಗಳನ್ನು ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಹಾಗೂ ಸೈಬರ್ ಕ್ರೈಂ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಹುಬ್ಬಳ್ಳಿ ಮೂಲದ ನಾಗರಾಜ್ ಗುಳ್ಳಪ್ಪ ತಳವಾರ (23) ಹಾಗೂ ಧಾರವಾಡ ಮೂಲದ ಪ್ರಶಾಂತ್ ತಳವಾರ (23) ಎಂದು ಗುರುತಿಸಲಾಗಿದೆ. ನಾಗರಾಜ್ ಗುಳ್ಳಪ್ಪ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಪ್ರಶಾಂತ್ ತಳವಾರ ಧಾರವಾಡದಲ್ಲಿ ಲೆಕ್ಕ ಪರಿಶೋಧಕ (ಆಡಿಟರ್) ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಷಯಕ್ಕೆ ಪ್ರತಿಕ್ರಿಯೆ ನೀಡುವ ನೆಪದಲ್ಲಿ ಕೆಲವರು ಅಶ್ಲೀಲ, ಅವಾಚ್ಯ ಮತ್ತು ಮಾನಹಾನಿಕರ ಸಂದೇಶಗಳನ್ನು ಕಳುಹಿಸಿದ್ದರು. ಇದರಿಂದ ಬೇಸರಗೊಂಡ ವಿಜಯಲಕ್ಷ್ಮೀ ದರ್ಶನ್ ಅವರು ಈ ಕುರಿತು ಬೆಂಗಳೂರು ಸಿಸಿಬಿ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗಿದ್ದ ನಕಲಿ ಖಾತೆಗಳು, ಐಪಿ ವಿಳಾಸಗಳು ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಆರೋಪಿಗಳು ಬೇರೆ ಬೇರೆ ಜಿಲ್ಲೆಗಳಿಂದ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬೆಂಗಳೂರಿನ ಚಿಕ್ಕಬಾಣಾವರ ನಿವಾಸಿ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಎಂಬುವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ನಾಗರಾಜ್ ಗುಳ್ಳಪ್ಪ ಹಾಗೂ ಪ್ರಶಾಂತ್ ತಳವಾರ ಬಂಧನವಾಗಿದೆ.
ಬಂಧಿತ ಆರೋಪಿಗಳ ಮೊಬೈಲ್ ಫೋನ್‌ಗಳು ಹಾಗೂ ಇತರ ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಈ ಪ್ರಕರಣದಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ಆಳವಾದ ತನಿಖೆ ಮುಂದುವರಿಸಿದ್ದಾರೆ.





