ತೆಲುಗು ಚಿತ್ರರಂಗದ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾದ ಈ ಜೋಡಿ, ಮದುವೆಯ ಬಳಿಕ ಮೊದಲ ಬಾರಿ ವಿಜಯ್ ಅವರ ತವರು ಗ್ರಾಮವಾದ ತೆಲಂಗಾಣದ ತುಮ್ಮನಪೇಟೆಗೆ ಭೇಟಿ ನೀಡಿದ್ದು, ಅಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿಜಯ್ ದೇವರಕೊಂಡ ತಮ್ಮ ಹುಟ್ಟೂರಿನಲ್ಲಿ ಹೊಸದಾಗಿ ನಿರ್ಮಿಸಿದ ಮನೆಯಲ್ಲಿ ಗೃಹಪ್ರವೇಶದ ನಂತರ ಮೊದಲ ಸತ್ಯನಾರಾಯಣ ಪೂಜೆಯನ್ನು ನವದಂಪತಿಗಳು ಶಾಸ್ತೋಕ್ತವಾಗಿ ನೆರವೇರಿಸಿದ್ದಾರೆ. ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಪೂಜೆ ತುಂಬಾ ಸರಳವಾಗಿ ಆದರೆ ಸಂಪ್ರದಾಯಬದ್ಧವಾಗಿ ನಡೆದಿರುವುದು ವಿಶೇಷ.
ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ
ಕೊಡಗಿನ ಬೆಡಗಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ, ಆಫ್-ವೈಟ್ ಮತ್ತು ಆರೆಂಜ್ ಕಾಂಬಿನೇಷನ್‌ನ ರೇಷ್ಮೆ ಸೀರೆಯಲ್ಲಿ ಮಲೆನಾಡ ಸಿರಿಯಂತೆ ಕಂಗೊಳಿಸುತ್ತಿದ್ದರು. ಕೈತುಂಬಾ ಬಂಗಾರದ ಬಳೆಗಳು, ಜ್ಯುವೆಲ್ಲರಿ, ಮುತ್ತಿನ ಹಾರ ಹಾಗೂ ಮಲ್ಲಿಗೆ ಹೂವಿನ ಅಲಂಕಾರಗೊಂಡ ಅವರು ಪಕ್ಕಾ ಗೃಹಿಣಿಯಂತೆ ಕಾಣಿಸಿಕೊಂಡರು. ಮುಖದಲ್ಲಿ ಮುದ್ದಾದ ನಗು, ಕಣ್ಣುಗಳಲ್ಲಿ ಸಂತೋಷ ಇವೆಲ್ಲ ಅಭಿಮಾನಿಗಳ ಮನಸೆಳೆಯುವಂತಿತ್ತು.
ಹಳ್ಳಿ ಹೈದನ ಸ್ಟೈಲ್‌ನಲ್ಲಿ ವಿಜಯ್
ಇನ್ನೊಂದೆಡೆ ವಿಜಯ್ ದೇವರಕೊಂಡ ಕ್ಲಾಸಿಕ್ ಬೇಜ್ ಬಣ್ಣದ ಕುರ್ತಾ ಮತ್ತು ವೈಟ್ ಪೈಜಾಮಾದಲ್ಲಿ ಹಳ್ಳಿ ಹೈದನಂತೆ ಕಾಣಿಸಿಕೊಂಡರು. ಸರಳವಾದ ಉಡುಪು ಧರಿಸಿದ್ದು, ರಶ್ಮಿಕಾ ಜೊತೆಗಿನ ಅವರ ಕ್ಯೂಟ್ ಕೆಮಿಸ್ಟ್ರಿ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಭಿಮಾನಿಗಳು “ಮೇಡ್ ಫಾರ್ ಈಚ್ ಅದರ್” ಎಂದು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.
ಗ್ರಾಮಸ್ಥರಿಗೆ ಸ್ವತಃ ಊಟ ಬಡಿಸಿದ ಜೋಡಿ
ಪೂಜೆಯ ನಂತರ ಕೇವಲ ಸೆಲೆಬ್ರಿಟಿಗಳಂತೆ ಕುಳಿತುಕೊಳ್ಳದೆ, ಈ ಜೋಡಿ ಸ್ವತಃ ನಿಂತು ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಗೆ ಊಟ ಬಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಜಯ್ ಅವರ ಸರಳತೆ ತುಮ್ಮನಪೇಟೆ ಗ್ರಾಮಸ್ಥರ ಮನ ಗೆದ್ದಿದೆ. “ಸ್ಟಾರ್‌ಗಳು ಆದರೂ ನಮ್ಮ ಮಕ್ಕಳೇ” ಎಂದು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ
ಈಗಾಗಲೇ ಈ ಜೋಡಿ ಹೈದರಾಬಾದ್‌ಗೆ ಮರಳಿದ್ದು, ಮಾರ್ಚ್ 4ರಂದು ನಡೆಯಲಿರುವ ಅದ್ಧೂರಿ ಆರತಕ್ಷತೆಗೆ ಸಿದ್ಧತೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರು ಹಾಗೂ ಬಾಲಿವುಡ್‌ನ ಹಲವು ಸ್ಟಾರ್‌ಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅತಿಥಿಗಳ ಪಟ್ಟಿಯನ್ನು ಬಹಳ ಕಿರಿದಾಗಿಸಲಾಗಿದೆ ಎಂದು ತಿಳಿದುಬಂದಿದೆ.