ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್

Untitled design 2026 06 29T213205.814

ಮಲಯಾಳಂ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಅಧಿಕೃತವಾಗಿದೆ. ಸುಮಾರು 12 ವರ್ಷಗಳ ನಂತರ, ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಮತ್ತೊಮ್ಮೆ ಒಂದಾಗಿದ್ದು, ‘ವಿಜಯಂ’ ಎಂಬ ಹೊಸ ಚಿತ್ರದ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ.

‘ನೇರಂ’ ಮತ್ತು ‘ಪ್ರೇಮಂ’ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ಈ ಜೋಡಿ ಮತ್ತೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ‘ವಿಜಯಂ’ ಚಿತ್ರವು ನಿವಿನ್ ಪೌಲಿ ಅವರ ವೃತ್ತಿಜೀವನದ 50ನೇ ಸಿನಿಮಾವಾಗಿದ್ದು, ಈ ಕಾರಣದಿಂದಲೂ ಈ ಪ್ರಾಜೆಕ್ಟ್‌ಗೆ ವಿಶೇಷ ಮಹತ್ವ ಸಿಕ್ಕಿದೆ.

ಚಿತ್ರದ ಶೀರ್ಷಿಕೆ ಅನಾವರಣವನ್ನು ಕೇರಳದ ಎರ್ನಾಕುಲಂನ ಐತಿಹಾಸಿಕ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ಬಿಡುಗಡೆಯಾದ ಟೈಟಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

‘ವಿಜಯಂ’ ಚಿತ್ರವು ರೇಸಿಂಗ್ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಆಕ್ಷನ್, ಭಾವನೆ ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಂಕಲನದ ಜವಾಬ್ದಾರಿಯನ್ನು ಆಲ್ಫೋನ್ಸ್ ಪುತ್ರೇನ್ ಅವರೇ ನಿರ್ವಹಿಸುತ್ತಿದ್ದಾರೆ.

ಚಿತ್ರವನ್ನು ಪೌಲಿ ಜೂನಿಯರ್ ಪಿಕ್ಚರ್ಸ್ ಹಾಗೂ ಸಿನೆಹೋಲಿಕ್ಸ್ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ನಿರ್ಮಿಸುತ್ತಿದ್ದಾರೆ. ತಾಂತ್ರಿಕವಾಗಿ ಭರ್ಜರಿ ಗುಣಮಟ್ಟದಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಚಿತ್ರದ ಹಿನ್ನೆಲೆ ಸಂಗೀತವನ್ನು ಕೇರಳ ಮೂಲದ ಸ್ಟೀವ್ ಕೊಟ್ಟೂರ್ ಸಂಯೋಜಿಸುತ್ತಿದ್ದಾರೆ. ಅವರು ಈ ಹಿಂದೆ ‘ದುರಂಧರ್’ ಹಾಗೂ ‘ದುರಂಧರ್ 2’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ್ದು, ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನದ ವೆಬ್ ಸರಣಿ ಬಾ*ಡ್ಸ್ ಆಫ್ ಬಾಲಿವುಡ್‌ನಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ.

ಸದ್ಯ ಚಿತ್ರತಂಡ ಟೈಟಲ್ ಅನ್ನು ಮಾತ್ರ ಅನಾವರಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಾಯಕಿ, ಉಳಿದ ತಾರಾಬಳಗ ಹಾಗೂ ತಾಂತ್ರಿಕ ತಂಡದ ಕುರಿತ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ಪ್ರಕಟಿಸುವುದಾಗಿ ತಿಳಿಸಿದೆ. ಈಗಾಗಲೇ ಈ ಘೋಷಣೆ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ‘ಪ್ರೇಮಂ’ ಮಾದರಿಯ ಮತ್ತೊಂದು ಬ್ಲಾಕ್‌ಬಸ್ಟರ್ ನೀಡುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.

Exit mobile version