ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್

Untitled design 2026 06 29T230855.874

ಕೋಟ್ಯಂತರ ಮಂದಿ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಶ್ರದ್ಧಾ ಕಪೂರ್ ನಟನೆಯ ಬಹುನಿರೀಕ್ಷಿತ ಈಥಾ ಸಿನಿಮಾ, ಬಿಡುಗಡೆಗೂ ಮೊದ್ಲೇ ವಿವಾದದ ಸುಳಿಗೆ ಸಿಲುಕಿದೆ. ಮಹಾರಾಷ್ಟ್ರದ ಖ್ಯಾತ ಲಾವಣಿ ನೃತ್ಯಗಾರ್ತಿ ವಿಠಾಬಾಯಿ ನಾರಾಯಣ ಗಾಂವ್ಕರ್ ಅವ್ರ ರೋಚಕ ಹಾಗೂ ರೋಮಾಂಚಕ ಕಥೆಯಾಧಾರಿಸಿದ ಈ ಚಿತ್ರ, ಟೈಟಲ್ ವಿಚಾರ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ಇಷ್ಟಕ್ಕೂ ಶ್ರದ್ಧಾಗೆ ಎದುರಾಗಿರುವ ಆ ಸಂಕಷ್ಟ ಏನು..? ವಿಠಾಬಾಯಿ ಫ್ಯಾಮಿಲಿ ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದೇಕೆ..? ಇಲ್ಲಿದೆ ನೋಡಿ.

ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್

ಶೀರ್ಷಿಕೆ ಬದಲಾಯಿಸಲು NCP ಖಡಕ್ ವಾರ್ನಿಂಗ್

ಕೋರ್ಟ್ ಮೆಟ್ಟಿಲೇರುತ್ತಾ ವಿಠಾಬಾಯಿ ಕುಟುಂಬ..?!

ಮೌನ ಮುರಿಯದ ಟೀಂ.. ಆ-28ಕ್ಕೆ ಕಾದಿದ್ಯಾ ಶಾಕ್?

ಬಾಲಿವುಡ್‌ ಬ್ಯೂಟಿ ಶ್ರದ್ಧಾ ಕಪೂರ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಸದ್ಯದಲ್ಲೇ ತೆರೆಗೆ ಬರಲಿರುವ ಬಯೋಪಿಕ್ ಚಿತ್ರ ಈಥಾ ಬಿಡುಗಡೆಗೂ ಮೊದಲೇ ಭಾರೀ ವಿವಾದದ ಸುಳಿಗೆ ಸಿಲುಕಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ, ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಆದರೆ, ಈಗ ಅದೇ ಸಿನಿಮಾದ ಟೈಟಲ್ ವಿಚಾರಕ್ಕೆ ಮಹಾರಾಷ್ಟ್ರದ ಕಲಾ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಚಿತ್ರದ ಶೀರ್ಷಿಕೆಯನ್ನು ತಕ್ಷಣವೇ ಬದಲಾಯಿಸಬೇಕು ಅನ್ನೋ ಖಡಕ್ ಒತ್ತಾಯ ಕೇಳಿಬಂದಿದ್ದು, ಶ್ರದ್ಧಾ ಕಪೂರ್ ಸಿನಿಮಾಗೆ ಆರಂಭದಲ್ಲೇ ಬಹುದೊಡ್ಡ ವಿಘ್ನ ಎದುರಾಗಿದೆ.

ಅಷ್ಟಕ್ಕೂ ಈ ವಿವಾದಕ್ಕೆ ಅಸಲಿ ಕಾರಣ ಮಹಾರಾಷ್ಟ್ರದ ಹೆಮ್ಮೆಯ ಪರಂಪರೆ ಮತ್ತು ಭಾವನೆ. ಹೌದು.. ಈ ಚಿತ್ರವು ಮಹಾರಾಷ್ಟ್ರದ ಪ್ರಖ್ಯಾತ ಲಾವಣಿ ನೃತ್ಯಗಾರ್ತಿ ಮತ್ತು ತಮಾಷಾ ಕಲೆಯ ದಂತಕಥೆ ವಿಠಾಬಾಯಿ ನಾರಾಯಣ ಗಾಂವ್ಕರ್ ಅವ್ರ ಜೀವನಗಾಥೆಯನ್ನ ಒಳಗೊಂಡಿದೆ. ವಿಠಾಬಾಯಿ ಕೇವಲ ಕಲಾವಿದೆಯಲ್ಲ. ಗರ್ಭಿಣಿಯಾಗಿದ್ದಾಗಲೂ ವೇದಿಕೆಯ ಮೇಲೆ ನೃತ್ಯ ಮಾಡಿ, ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ರಂಗಪ್ರವೇಶ ಮಾಡಿದ ಅದ್ಭುತ ಸಾಹಸಿ ಮಹಿಳೆ. ಅಂತಹ ಮಹಾನ್ ಚೇತನದ ಬಯೋಪಿಕ್‌ಗೆ ಈಥಾ ಅಂತ ಹೆಸರಿಟ್ಟಿರುವುದು ಕಲಾಭಿಮಾನಿಗಳ ಕೆರಳುವಿಕೆಗೆ ಕಾರಣವಾಗಿದೆ.

ಯೆಸ್.. ಈ ಟೈಟಲ್ ವಿರುದ್ಧ ಈಗ ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಯುದ್ಧ ಸಾರಿವೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಿನಿಮಾ ಮತ್ತು ಸಾಂಸ್ಕೃತಿಕ ವಿಭಾಗವು ಈಥಾ ಹೆಸರಿನ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದೆ. ಈ ಅಡ್ಡ ಹೆಸರು ವಿಠಾಬಾಯಿ ಅವರ ಪರಂಪರೆ, ಸಾಧನೆ ಮತ್ತು ಕಲಾ ಸೇವೆಗೆ ಮಾಡುವ ಘೋರ ಅವಮಾನ ಎಂದು NCP ವಾದಿಸಿದೆ. ಚಿತ್ರಕ್ಕೆ ಗೌರವಯುತವಾಗಿ ವಿಠಾಬಾಯಿ ಎಂದೇ ಹೆಸರಿಡಬೇಕು ಅಂತ NCPಯ ಸಾಂಸ್ಕೃತಿಕ ವಿಭಾಗದ ರಾಜ್ಯಾಧ್ಯಕ್ಷ ಬಾಬಾಸಾಹೇಬ್ ಪಾಟೀಲ್ ಗುಡುಗಿದ್ದಾರೆ.

ಟ್ವಿಸ್ಟ್ ಏನೆಂದ್ರೆ.. ಕೇವಲ ರಾಜಕೀಯ ಪಕ್ಷ ಮಾತ್ರವಲ್ಲದೇ ಸ್ವತಃ ವಿಠಾಬಾಯಿ ನಾರಾಯಣ ಗಾಂವ್ಕರ್ ರಕ್ತಸಂಬಂಧಿಗಳೇ ಈಗ ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ. ವಿಠಾಬಾಯಿ ಪುತ್ರ ಕೈಲಾಶ್ ನಾರಾಯಣ ಗಾಂವ್ಕರ್, ರಾಜೇಶ್ ನಾರಾಯಣ ಗಾಂವ್ಕರ್ ಮತ್ತು ಮೊಮ್ಮಗ ಮೋಹಿತ್ ನಾರಾಯಣ ಗಾಂವ್ಕರ್ ಅವರು NCPಯ ಹೋರಾಟಕ್ಕೆ ಸಾಥ್ ನೀಡಿದ್ದು, ಯಾವುದೇ ಕಾರಣಕ್ಕೂ ಈ ಟೈಟಲ್ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಡೀ ಕುಟುಂಬವೇ ಚಿತ್ರದ ಶೀರ್ಷಿಕೆ ಬದಲಾಯಿಸಲು ಪಟ್ಟು ಹಿಡಿದಿರುವುದು ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ನಿರ್ಮಾಣ ಸಂಸ್ಥೆಗೆ ತಲೆನೋವಾಗಿದೆ.

ಸ್ತ್ರೀ ಸರಣಿಯ ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ ಶ್ರದ್ಧಾ ಕಪೂರ್ ಮತ್ತು ನಿರ್ಮಾಪಕ ದಿನೇಶ್ ವಿಜನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಹೈ-ಬಜೆಟ್ ಸಿನಿಮಾ, ಇದೇ ಆಗಸ್ಟ್ 28ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ರಣ್‌‌ದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಆಯೂಬ್‌ರಂತಹ ದೈತ್ಯ ಪ್ರತಿಭೆಗಳಿರುವ ಈ ಚಿತ್ರದ ವಿವಾದದ ಬಗ್ಗೆ ಇಡೀ ಬಾಲಿವುಡ್ ಸದ್ಯ ಸೈಲೆಂಟ್ ಆಗಿದೆ. ಇಷ್ಟೆಲ್ಲಾ ಹಂಗಾಮಾ ಆಗ್ತಿದ್ರೂ ಸಹ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅಥ್ವಾ ಪ್ರೊಡಕ್ಷನ್ ಹೌಸ್ ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ. ಚಿತ್ರತಂಡ ಈ ವಿವಾದಕ್ಕೆ ಮಣಿದು ಹೆಸರು ಬದಲಾಯಿಸುತ್ತಾ? ಅಥ್ವಾ ವಿಠಾಬಾಯಿ ಫ್ಯಾಮಿಲಿ ಜಿದ್ದಿಗೆ ಬಿದ್ದು ಕೋರ್ಟ್ ಮೆಟ್ಟಿಲೇರುತ್ತಾ? ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.

Exit mobile version