ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ನಟ ದರ್ಶನ್ ತೂಗುದೀಪ ಅವರ ಜಾಮೀನು ರದ್ದುಗೊಂಡು ಮತ್ತೆ ಜೈಲು ಸೇರಿದ ಬಗ್ಗೆ ಹಿರಿಯ ನಟಿ ಉಮಾಶ್ರೀ ಗ್ಯಾರಂಟಿ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅವರ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
“ದರ್ಶನ್ ಚಿತ್ರರಂಗದ ವ್ಯಾಪಾರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಅವರ ಬಂಧನದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರತಿಯೊಬ್ಬ ನಾಗರಿಕನಂತೆ ನಾವೂ ಗೌರವಿಸಬೇಕು. ಕಲಾವಿದರಾದ ನಾವು ಸಮಾಜದ ಸ್ವತ್ತು. ನಮ್ಮ ಪ್ರತಿಯೊಂದು ಮಾತು, ನಡತೆ ಸಮಾಜ ಗಮನಿಸುತ್ತದೆ. ಆದ್ದರಿಂದ, ನಾವು ಚೌಕಟ್ಟಿನಲ್ಲಿ ವರ್ತಿಸಬೇಕು ಎಂದು ಜನರು ನಿರೀಕ್ಷಿಸುತ್ತಾರೆ,” ಎಂದು ಹಿರಿಯ ನಟಿ ಉಮಾಶ್ರೀ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಸೇರಿದಂತೆ ಕಲಾವಿದರಿಗೆ ನಡೆಯುತ್ತಿರುವ ಅವಹೇಳನದ ಬಗ್ಗೆ ಮಾತನಾಡಿದ ಅವರು, “ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಟೀಕೆ-ಪ್ರಶಂಸೆಗಳು ಸಹಜ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಯಮ ಕಳೆದುಕೊಂಡಾಗ ಇಂತಹ ಘಟನೆಗಳು ಸಂಭವಿಸುತ್ತವೆ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಿರಲಿಲ್ಲ. ಆಗ ಅಭಿಮಾನಿಗಳು ಕೂಗಾಟ, ಕಿರುಚಾಟದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದರು. ಈಗಿನ ಹೊಸ ಪೀಳಿಗೆಯ ಅಭಿಮಾನಿಗಳು ಪ್ರಬುದ್ಧ ಚಿಂತನೆಯಿಂದ ವರ್ತಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ,” ಎಂದು ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ.
ದರ್ಶನ್ ಅವರ ಕೊಡುಗೆಯ ಬಗ್ಗೆ ಮಾತನಾಡಿದ ಉಮಾಶ್ರೀ, “ದರ್ಶನ್‌ನಿಂದ ಚಿತ್ರರಂಗಕ್ಕೆ ಒಳ್ಳೆಯ ಕೊಡುಗೆಗಳಿವೆ. ಈಗಿನ ಬೆಳವಣಿಗೆಯಿಂದ ನಷ್ಟವೂ ಆಗಿದೆ. ಅವರಿಂದ ಇನ್ನೂ ಒಳ್ಳೆಯ ಕೆಲಸಗಳು ಆಗಬೇಕಿತ್ತು. ಆದರೆ, ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ನಡೆಯಬೇಕಿದೆ. ತೀರ್ಮಾನವಾಗಬೇಕಿದೆ. ಇದಕ್ಕೆ ಯಾರೂ ನಿರಾಸೆಯಾಗಬಾರದು. ಯಾರಿಗಾದರೂ ನ್ಯಾಯ ಸಿಗಬೇಕು,” ಎಂದು ಹಿರಿಯ ನಟಿ ಉಮಾಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಅಭಿಮಾನಿಗಳಿಗೆ ಸಂದೇಶ ನೀಡಿರುವ ಅವರು, “ಸ್ವಲ್ಪ ಶಾಂತವಾಗಿರಿ. ಸಮಾಜ ನಮ್ಮ ನಡವಳಿಕೆ, ಮಾತು, ಉಡುಗೆ-ತೊಡಿಗೆಯನ್ನು ಗಮನಿಸುತ್ತದೆ. ರಾಜ್‌ಕುಮಾರ್, ವಿಷ್ಣುವರ್ಧನ್, ಸರೋಜಾ ದೇವಿ ಇವರೆಲ್ಲರೂ ಚೌಕಟ್ಟಿನಲ್ಲಿ ವರ್ತಿಸುತ್ತಿದ್ದರು. ಇಂತಹ ಘಟನೆಗಳು ಆಗಬಾರದಿತ್ತು. ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ,” ಎಂದು ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ.
ದರ್ಶನ್ ಜಾಮೀನು ರದ್ದು ವಿಚಾರದ ಬಗ್ಗೆ ಮಾತನಾಡಿದ ಉಮಾಶ್ರೀ, “ಸುಪ್ರೀಂ ಕೋರ್ಟ್ ಆದೇಶವನ್ನು ಪ್ರತಿ ನಾಗರಿಕರು ಗೌರವಿಸಬೇಕು. ಸುಪ್ರೀಂ ಆದೇಶವನ್ನು ಪಾಲಿಸಬೇಕಾದದ್ದು ನಮಗೆ ಅನಿವಾರ್ಯ. ಈ ಘಟನೆ ಆಗಿರೋದ್ರಿಂದ ನಮಗೂ ನೋವು ಆಗಿದೆ. ಟೀಕೆ ಟಿಪ್ಪಣಿಗಳು ಬರುತ್ತಲೇ ಇರುತ್ತವೆ. ಅವುಗಳು ನಾವು ಹೇಗಿದ್ದರೂ ನಮ್ಮನ್ನ ಬಿಡೋದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದಲ್ಲಿ ನೀಡಿದ್ದಾರೆ. ಹೀಗಾಗಿ ಪರ ವಿರೋಧ ಇದ್ದಿದ್ದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಪರವಾಗಿದ್ದವರು ತಮ್ಮ ಹೇಳಿಕೆ ನೀಡ್ತಿರುತ್ತಾರೆ,” ಎಂದು ಹಿರಿಯ ನಟಿ ಉಮಾಶ್ರೀ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಗ್ಗೆ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಂದಿದೆ. ಅಲ್ಲಿ ಬರೆಯುವ ಬರಹಗಳು ನೋಡಿದಾಗ ಸಂಯಮ ಇಟ್ಟುಕೊಳ್ಳಬೇಕು. ಭಾಷೆಯನ್ನು ಯಾವ ರೀತಿ ಪ್ರಯೋಗ ಮಾಡಬೇಕು ಅನ್ನೋದನ್ನ ಯೋಚನೆ ಮಾಡಬೇಕು. ಮಾತನಾಡುವವರು ಸ್ವಲ್ಪ ಪ್ರಬುದ್ಧತೆ ಹೊಂದಬೇಕು. ಪರ ವಿರೋಧವಾಗಿ ಮಾತಾಡೋರು ನಮ್ಮ ಕನ್ನಡಿಗರೇ ಅಲ್ಲವೇ? ಪರಸ್ಪರ ನಾವು ನಾವೇ ನಿಂದಿಸಿಕೊಳ್ಳೋದು ಒಳ್ಳೆಯದಲ್ಲ,” ಎಂದು ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ.
ಕಾಲ ಬದಲಾವಣೆಯ ಬಗ್ಗೆ ಅಭಿಪ್ರಾಯಪಟ್ಟ ಅವರು, “ಕಾಲ ಬದಲಾಗುತ್ತಲೇ ಇರುತ್ತದೆ, ಜಗತ್ತು ನಡೆಯುತ್ತಲೇ ಇರಬೇಕು. ಪೀಳಿಗೆಯಿಂದ ಪೀಳಿಗೆಗೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಏನೇ ಬದಲಾದರೂ ಕೂಡ ನಮ್ಮ ನಾಡಿನ ಕುಟುಂಬ, ನಮ್ಮ ಸಂಸ್ಕಾರ ಸಂಸ್ಕೃತಿ ಚೌಕಟ್ಟಿನಲ್ಲಿರಬೇಕು,” ಎಂದು ಹಿರಿಯ ನಟಿ ಉಮಾಶ್ರೀ ತಿಳಿಸಿದ್ದಾರೆ.
ದರ್ಶನ್ ಅವರೊಂದಿಗಿನ ಪರಿಚಯದ ಬಗ್ಗೆ ಮಾತನಾಡಿದ ಹಿರಿಯ ನಟಿ ಉಮಾಶ್ರೀ, “ನಾನು ಬಹಳ ವರ್ಷದ ಹಿಂದಿನಿಂದಲೂ ದರ್ಶನ್ ಬಲ್ಲೆ. ಮೆಜೆಸ್ಟಿಕ್ ಚಿತ್ರಕ್ಕಿಂತಲೂ ಮೊದಲಿನಿಂದಲೂ ಪರಿಚಯ. ಬಹಳ ಕಷ್ಟಪಟ್ಟು ಮೇಲೆ ಬಂದಿರೋ ಹುಡುಗ. ಆತನಿಗೆ ಹೀಗೆ ಆಗಿರೋದ್ರಿಂದ ನೋವು, ಸಂಕಟ ಇದೆ,” ಎಂದು ಭಾವುಕರಾಗಿ ಹೇಳಿದ್ದಾರೆ.