ತಮಿಳು ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಇತ್ತೀಚೆಗೆ ತಮ್ಮ ಹೊಸ ತಮಿಳು ಸಿನಿಮಾ ‘ಕರುಪ್ಪು’ (Karuppu) ಚಿತ್ರದ ಶೂಟಿಂಗ್ ಹಂತದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ಪೋಸ್ಟ್‌ನೊಂದಿಗೆ ಬರೆದಿರುವ ಕ್ಯಾಪ್ಷನ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ತ್ರಿಷಾ ಪೋಸ್ಟ್‌ಗೆ “My magical May said, One More for the Win. Just God Things” ಎಂದು ಬರೆದುಕೊಂಡಿದ್ದರು. ಈ ಸಾಲುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಇತ್ತೀಚಿನ ರಾಜಕೀಯ ಗೆಲುವಿನೊಂದಿಗೆ ಜೋಡಿಸಿ ನೋಡುತ್ತಿದ್ದಾರೆ. ವಿಜಯ್ ಅವರ ಮುಖ್ಯಮಂತ್ರಿಯಾಗಿರುವ ಸಂಭ್ರಮವನ್ನು ತ್ರಿಷಾ ಪರೋಕ್ಷವಾಗಿ ಆಚರಿಸಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಷಾ ನಡುವಿನ ಆತ್ಮೀಯತೆ ಕುರಿತ ವದಂತಿಗಳು ಭಾರೀ ಸದ್ದು ಮಾಡುತ್ತಿವೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಶುರುವಾಗಿದ್ದು, ಇದೇ ಕಾರಣಕ್ಕೆ ತ್ರಿಷಾ ಮಾಡುತ್ತಿರುವ ಪ್ರತಿಯೊಂದು ಪೋಸ್ಟ್‌ಗೂ ಇದೀಗ ವಿಭಿನ್ನ ಅರ್ಥಗಳನ್ನು ಹುಡುಕಲಾಗುತ್ತಿದೆ.
ಇತ್ತೀಚೆಗೆ ವಿಜಯ್ ಮುಖ್ಯಮಂತ್ರಿ ಪದವಿಗೆ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ತ್ರಿಷಾ ಭಾಗವಹಿಸಿದ್ದ ಫೋಟೋಗಳು ಕೂಡ ಸಾಕಷ್ಟು ವೈರಲ್ ಆಗಿದ್ದವು. ಅಲ್ಲದೆ ವಿಜಯ್ ಅವರ ಪೋಷಕರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದ ಕ್ಷಣಗಳೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದವು. ಈ ಎಲ್ಲಾ ಘಟನೆಗಳ ನಂತರ ತ್ರಿಷಾ ಹಂಚಿಕೊಂಡ ಹೊಸ ಪೋಸ್ಟ್ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ತ್ರಿಷಾ ಮತ್ತು ವಿಜಯ್ ಜೋಡಿ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಂದು. ಇಬ್ಬರೂ ಒಟ್ಟಿಗೆ ನಟಿಸಿದ ಗಿಲ್ಲಿ, ತಿರುಪಾಚಿ, ಆತಿ, ಕುರುವಿ ಸೇರಿದಂತೆ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅವರ ಕೆಮಿಸ್ಟ್ರಿ ಅಭಿಮಾನಿಗಳ ಮನ ಗೆದ್ದಿತ್ತು. ಸುಮಾರು 15 ವರ್ಷಗಳ ಬಳಿಕ ಲಿಯೋ ಚಿತ್ರದ ಮೂಲಕ ಮತ್ತೆ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು.
ಇದೀಗ ತ್ರಿಷಾ ಹಂಚಿಕೊಂಡ “One More for the Win” ಎಂಬ ಕ್ಯಾಪ್ಷನ್ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೆಲವರು ಇದು ಕೇವಲ ಸಿನಿಮಾ ಯಶಸ್ಸಿನ ಬಗ್ಗೆ ಇರಬಹುದು ಎಂದು ಹೇಳುತ್ತಿದ್ದರೆ, ಕೆಲವರು ವಿಜಯ್ ಅವರ ರಾಜಕೀಯ ಯಶಸ್ಸಿನತ್ತಲೇ ಈ ಪೋಸ್ಟ್ ಸೂಚಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಆದರೆ ಈ ಕುರಿತು ತ್ರಿಷಾ ಅಥವಾ ವಿಜಯ್ ಯಾರೂ ಸ್ಪಷ್ಟನೆ ನೀಡಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಬರುತ್ತಿದ್ದು, #Trisha ಮತ್ತು #Vijay ಹ್ಯಾಶ್‌ಟ್ಯಾಗ್‌ಗಳು ಮತ್ತೆ ಟ್ರೆಂಡ್ ಆಗಿವೆ. ಅಭಿಮಾನಿಗಳು ಇಬ್ಬರ ಫೋಟೋಗಳು, ಹಳೆಯ ಸಿನಿಮಾದ ದೃಶ್ಯಗಳು ಹಾಗೂ ಕಾರ್ಯಕ್ರಮಗಳ ವಿಡಿಯೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಿದ್ದಾರೆ.
