‘ಟಾಕ್ಸಿಕ್’ ಮೂರನೇ ರೊಮ್ಯಾಂಟಿಕ್ ಹಾಡಿಗೆ ಕೌಂಟ್‌ಡೌನ್: ಯಶ್–ಕಿಯಾರಾ ಜೋಡಿಗೆ ಮತ್ತೆ ಮ್ಯಾಜಿಕ್!

Untitled design 2026 07 25T163314.967

ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್’ ಸಿನಿಮಾದ ಬ್ಯಾಕ್-ಟು-ಬ್ಯಾಕ್ ರೊಮ್ಯಾಂಟಿಕ್ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಗೆದ್ದಿದ್ದು, ಇದೀಗ ಮೂರನೇ ಹಾಡಿನ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ. ‘ತಬಾಹಿ’ ಹಾಗೂ ‘ಮನಮೋಹಕ’ ಹಾಡುಗಳ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಮೆಲೋಡಿಯಸ್ ಲವ್ ಸಾಂಗ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.

ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಪ್ರೇಮಕಥೆ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿವೆ. ಮೊದಲ ಎರಡು ಹಾಡುಗಳಲ್ಲಿ ಈ ಜೋಡಿಯ ಅದ್ಭುತ ಕೆಮಿಸ್ಟ್ರಿ ಮೆಚ್ಚುಗೆ ಪಡೆದಿದ್ದು, ಮೂರನೇ ಹಾಡು ಕೂಡ ಇದೇ ಜೋಡಿಯ ಭಾವನಾತ್ಮಕ ಪ್ರೇಮಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಈ ಹೊಸ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಸಂಗೀತ ಸಂಯೋಜಿಸಿದ್ದು, ಮತ್ತೊಮ್ಮೆ ಮನಮುಟ್ಟುವ ಮೆಲೋಡಿ ನೀಡಲಿದ್ದಾರೆ. ಗ್ಯಾಂಗ್‌ಸ್ಟರ್ ಹಿನ್ನೆಲೆಯ ಸಿನಿಮಾ ಎಂದಾಗ ಭಾರೀ ಮಾಸ್ ಹಾಡುಗಳು ಇರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ‘ಟಾಕ್ಸಿಕ್’ ತಂಡ ಆ ನಿರೀಕ್ಷೆಗೆ ವಿಭಿನ್ನ ತಿರುವು ನೀಡಿ, ಪ್ರೇಮಕಥೆಯನ್ನು ಕೇಂದ್ರವಾಗಿಟ್ಟುಕೊಂಡ ರೊಮ್ಯಾಂಟಿಕ್ ಹಾಡುಗಳನ್ನು ಒಂದಾದ ಮೇಲೊಂದು ಬಿಡುಗಡೆ ಮಾಡುತ್ತಿದೆ.

ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಅವುಗಳಲ್ಲಿ ನಾಲ್ಕು ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ. ವಿಶೇಷ ಹಾಡೊಂದನ್ನು ತನಿಷ್ಕ್ ಬಾಗ್ಚಿ ಅವರು ಫಹೀಮ್ ಅಬ್ದುಲ್ಲಾ ಮತ್ತು ಅಸ್ಲಾನ್ ನಿಜಾಮಿ ಅವರೊಂದಿಗೆ ಸೇರಿ ಸಂಯೋಜಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತದ ಜೊತೆಗೆ ಹೈ-ಎನರ್ಜಿ ಹಾಡೊಂದನ್ನು ರವಿ ಬಸ್ರೂರು ನೀಡಿದ್ದಾರೆ. ಹೀಗಾಗಿ ಸಂಗೀತದ ವಿಚಾರದಲ್ಲಿ ‘ಟಾಕ್ಸಿಕ್’ ವಿಭಿನ್ನ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.

ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಮಕಥೆ, ಭಾವನಾತ್ಮಕ ಕ್ಷಣಗಳು ಹಾಗೂ ಗ್ಯಾಂಗ್‌ಸ್ಟರ್ ಕಥೆಯನ್ನು ಸಮತೋಲನದಲ್ಲಿ ಕಟ್ಟಿಕೊಡಲು ಚಿತ್ರತಂಡ ಪ್ರಯತ್ನಿಸಿದೆ. ಈಗ ಮೂರನೇ ಹಾಡಿನ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವ ವಿಶ್ವಾಸವನ್ನು ಚಿತ್ರತಂಡ ಹಾಗೂ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

 

 

Exit mobile version