ಬ್ರೆಜಿಲ್ ಮೂಲದ ನಟಿ ಮತ್ತು ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಕಾರಣ, ಸೂಪರ್‌ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟೀಸರ್‌ನಲ್ಲಿ ಅವರು ಕಾಣಿಸಿಕೊಂಡಿರುವ ರೊಮ್ಯಾಂಟಿಕ್ ದೃಶ್ಯ. ಈ ದೃಶ್ಯ ಸ್ಮಶಾನದ ಹಿನ್ನೆಲೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ.
ಟೀಸರ್ ಬಿಡುಗಡೆಯಾದ ನಂತರ, ದೃಶ್ಯದಲ್ಲಿ ಕಾಣಿಸಿಕೊಂಡ ನಟಿಯನ್ನು ಯಶ್‌ನ ಹಿಂದಿನ ಚಿತ್ರ ‘ಕೆಜಿಎಫ್’ ನಲ್ಲಿ ನಟಿಸಿದ ನಟಾಲಿಯಾ ಬರ್ನ್ ಎಂದು ಅನೇಕರು ಭಾವಿಸಿದ್ದರು. ಆದರೆ, ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಇದನ್ನು ಸ್ಪಷ್ಟಪಡಿಸಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಟೀಸರ್‌ನಲ್ಲಿ ಕಾಣಿಸಿಕೊಂಡವರು ಬೀಟ್ರಿಜ್ ಟೌಫೆನ್‌ಬಾಚ್ ಎಂದು ಸ್ಪಷ್ಟಪಡಿಸಿದ್ದರು. ಗೀತು ಅವರೇ ಬೀಟ್ರಿಜ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಈ ಎಲ್ಲಾ ವಿವಾದಗಳ ನಡುವೆ, ಬೀಟ್ರಿಜ್ ಅವರ ಇನ್‌ಸ್ಟಾಗ್ರಾಮ್ ಖಾತೆ ಏನಾಯಿತು ಎಂಬುದು ಇನ್ನೊಂದು ಪ್ರಶ್ನೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಅಧಿಕೃತ ಪ್ರೊಫೈಲ್ ಹುಡುಕಿದಾಗ, ಅದು ನಿಷ್ಕ್ರಿಯಗೊಂಡಿರುವುದು ಕಂಡುಬಂದಿದೆ. ಗೀತು ಮೋಹನ್‌ದಾಸ್ ಟ್ಯಾಗ್ ಮಾಡಿದ್ದ ಲಿಂಕ್ ಈಗ ಕಾರ್ಯನಿರ್ವಹಿಸುತ್ತಿಲ್ಲ. ಇದು ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಿದ್ದಾರೆಯೋ ಅಥವಾ ಡಿ-ಆಕ್ಟಿವೇಟ್ ಮಾಡಿದ್ದಾರೆಯೋ ಎಂದು ತಿಳಿದುಬಂದಿಲ್ಲ.
ಈ ನಡುವೆ, ಬೀಟ್ರಿಜ್ ಅವರ ಇನ್‌ಸ್ಟಾಗ್ರಾಮ್ ಚಟುವಟಿಕೆಗಳು ಕೂಡ ಗಮನ ಸೆಳೆದಿವೆ. ಟೀಸರ್ ಬಿಡುಗಡೆಗೆ ಮುಂಚೆ, ಅವರ ಖಾತೆಯಲ್ಲಿ ಕೇವಲ ಸಾವಿರಾರು ಫಾಲೋವರ್ಸ್‌ಗಳು ಮಾತ್ರ ಇದ್ದರು ಮತ್ತು ಅವರ ಪ್ರೊಫೈಲ್ ಪ್ರೈವೇಟ್ ಆಗಿತ್ತು. ಆದರೆ, ಮೊದಲು ನಟಾಲಿಯಾ ಬರ್ನ್ ಎಂದು ತಪ್ಪಾಗಿ ಗುರುತಿಸಲ್ಪಟ್ಟ ನಂತರ, ಆಕೆಯ ಫಾಲೋವರ್ಸ್ ಸಂಖ್ಯೆ ಹಠಾತ್ತನೆ 50,000 ಕ್ಕೂ ಅಧಿಕ ಏರಿತ್ತು. ನಿಜವಾದ ನಟಿ ಬೀಟ್ರಿಜ್ ಎಂದು ತಿಳಿದ ನಂತರ, ಈ ಫಾಲೋ ರಿಕ್ವೆಸ್ಟ್‌ಗಳು ಬೀಟ್ರಿಜ್‌ಗೆ ಹೆಚ್ಚಾಗಿವೆ. ಇದರಿಂದಾಗಿ ಅವರಿಗೆ ಅನವಶ್ಯಕ ಕಿರಿಕಿರಿ ಆಗಿರುವ ಸಾಧ್ಯತೆಯಿದೆ. ಹೀಗಾಗಿ ಅವರು ತಮ್ಮ ಅಕೌಂಟ್ ನಿಷ್ಕ್ರಿಯಗೊಳಿಸಿದ್ದಾರಾ..? ಅಥವಾ ಇನ್‌ಆಕ್ಟೀವ್ ಮಾಡಿದ್ದಾರಾ..? ಎಂಬ ಮಾತುಗಳು ಕೇಳಿಬರುತ್ತಿವೆ.
ಸಧ್ಯ ಟಾಕ್ಸಿಕ್ ಚಿತ್ರದ ರೊಮ್ಯಾಂಟಿಕ್ ಸೀನ್‌ಗಳು ಎಲ್ಲರ ಗಮನ ಸೆಳೆದಿದ್ದು, ಈ ದೃಶ್ಯಗಳು ಅಶ್ಲೀಲ ಮತ್ತು ನೈತಿಕತೆಗೆ ಧಕ್ಕೆ ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ವಿರೋಧಿಸಿ, ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC)ಗೆ ದೂರು ಸಲ್ಲಿಸಿದ್ದಾರೆ.





