ಟಾಲಿವುಡ್ ಅಂಗಳದಲ್ಲಿ ಈಗ ಸಿಲ್ವರ್ ಸ್ಕ್ರೀನ್ ಬಿರುಗಾಳಿಗಿಂತ ಆಸ್ಪತ್ರೆಗಳ ಅಪ್‌ಡೇಟ್‌ಗಳೇ ಸೌಂಡ್ ಮಾಡ್ತಿವೆ. ಸಾಲು ಸಾಲು ಆಕ್ಷನ್ ಕಿಂಗ್‌ಗಳು ಮತ್ತು ಗ್ಲಾಮರ್ ಕ್ವೀನ್ ಸಾಹಸ ಮಾಡಲು ಹೋಗಿ ಬೆಡ್ ರೆಸ್ಟ್ ಹತ್ತಿದ್ದಾರೆ. ಬಾಕ್ಸ್ ಆಫೀಸ್ ಶೇಕ್ ಮಾಡಬೇಕಿದ್ದ ನಾಯಕ-ನಾಯಕಿಯರು ಈಗ ವೈದ್ಯರ ಸಲಹೆ ಮೇರೆಗೆ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದಾರೆ. ಅಷ್ಟಕ್ಕೂ ಸಿನಿರಂಗದ ಶಾಕಿಂಗ್ ಹೆಲ್ತ್ ಅಪ್‌ಡೇಟ್ಸ್ ಏನು..? ಯಾರಿಗೆಲ್ಲ ಪೆಟ್ಟಾಗಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್…
- ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು
- ಹಿಪ್ ಟೆಂಡನ್ ಡಿಟ್ಯಾಚ್ ಆಗಿ ಬೆಡ್ ರೆಸ್ಟ್‌ನಲ್ಲಿರುವ ರಶ್ಮಿಕಾ
- ಡ್ರಾಗನ್ ಅಖಾಡದಲ್ಲಿ ಜೂ. ಎನ್‌ಟಿಆರ್ ಶೋಲ್ಡರ್ ಇಂಜುರಿ
- ಶೂಟಿಂಗ್ ಗೆ ಬ್ರೇಕ್ ನಿರ್ಮಾಪಕರ ಎದೆಯಲ್ಲಿ ಡವಡವ..!
ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಗೆ ಈಗ ಅನಿವಾರ್ಯ ವಿಶ್ರಾಂತಿಯ ಬ್ರೇಕ್ ಸಿಕ್ಕಿದೆ. ‘ರಣಬಾಲಿ’ ಮತ್ತು ‘ಮೈಸಾ’ ಚಿತ್ರಗಳ ಹೈ-ವೋಲ್ಟೇಜ್ ಆಕ್ಷನ್ ಸೀನ್ ಹಾಗೂ ಭರ್ಜರಿ ಡ್ಯಾನ್ಸ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾಗ ಅವರ ಸೊಂಟದ ಭಾಗದಲ್ಲಿ ‘ಟೆಂಡನ್ ಡಿಟ್ಯಾಚ್’ ಆಗಿದೆ. ಕ್ರೀಡಾಪಟುಗಳಲ್ಲಿ ಕಂಡುಬರುವಂತಹ ಈ ಗಂಭೀರ ಗಾಯದಿಂದಾಗಿ ವೈದ್ಯರು ರಶ್ಮಿಕಾಗೆ ಕನಿಷ್ಠ 6 ರಿಂದ 8 ವಾರಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಸೂಚಿಸಿದ್ದಾರೆ. ಸದ್ಯ ರಶ್ಮಿಕಾ ಸೈಲೆಂಟ್ ಆಗಿರುವುದರಿಂದ ಕಮಿಟ್ ಆಗಿದ್ದ ಮಲ್ಟಿ-ಲ್ಯಾಂಗ್ವೇಜ್ ಸಿನಿಮಾಗಳ ಡೇಟ್ಸ್ ಕಂಪ್ಲೀಟ್ ಶೇಕ್ ಆಗಿದ್ದು, ಪ್ರೊಡ್ಯೂಸರ್ಸ್ ಎದೆಯಲ್ಲಿ ತವಕ ಶುರುವಾಗಿದೆ.
ಮತ್ತೊಂದೆಡೆ ಮಾಸ್ ಪ್ರಿಯರ ನೆಚ್ಚಿನ ನಟ, ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ‘ಡ್ರಾಗನ್’ ಸಿನಿಮಾದ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ. ಕಠಿಣ ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ತಾರಕ್ ಭುಜಕ್ಕೆ ಬಲವಾದ ಪೆಟ್ಟು ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಪರೇಷನ್ ಯಶಸ್ವಿಯಾಗಿದ್ದರೂ, ವೈದ್ಯರು ಬರೋಬ್ಬರಿ 8 ವಾರಗಳ ಕಾಲ ಕಂಪ್ಲೀಟ್ ಬೆಡ್ ರೆಸ್ಟ್ ಪಡೆಯುವಂತೆ ಅರ್ಜೆಂಟ್ ವಾರ್ನಿಂಗ್ ಕೊಟ್ಟಿದ್ದಾರೆ. ಇದರಿಂದ ಶೂಟಿಂಗ್ ಸಂಪೂರ್ಣ ಸ್ಥಗಿತಗೊಂಡಿದ್ದು, ತಾರಕ್ ಅಖಾಡಕ್ಕೆ ಮರಳುವುದನ್ನೇ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಮೇಗಾ ಪವರ್ ಸ್ಟಾರ್ ರಾಮ್ ಚರಣ್ ‘ಪೆದ್ದಿ’ ಚಿತ್ರಕ್ಕಾಗಿ ಸಖತ್ ರಫ್ ಅಂಡ್ ಟಫ್ ಆಗಿ ತಾಲೀಮು ನಡೆಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ಕುಸ್ತಿ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಅವರ ಮಣಿಕಟ್ಟಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಕೂಡಲೇ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಚರಣ್, ಮಣಿಕಟ್ಟಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಪೆದ್ದಿ ಶೂಟಿಂಗ್ ಶೆಡ್ಯೂಲ್ ಕೂಡ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.
ಹಿರಿಯ ನಟ, ನಂದಮೂರಿ ಬಾಲಕೃಷ್ಣ ಸಹ ಆಕ್ಷನ್ ಹಂಗಾಮಾದಲ್ಲಿ ಗಾಯಗೊಂಡಿದ್ದಾರೆ. ತಮ್ಮ ‘NBK111’ ಚಿತ್ರದ ಬೃಹತ್ ಸಾಹಸ ಸನ್ನಿವೇಶದಲ್ಲಿ ಅಭಿನಯಿಸುವಾಗ ಅವರ ಮೊಣಕಾಲಿಗೆ ತೀವ್ರವಾದ ಪೆಟ್ಟಾಗಿತ್ತು. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಅವರಿಗೆ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಾಕ್ಸ್ ಆಫೀಸ್ ತಮ್ಮ ಆಕ್ಷನ್ ಮೂಲಕ ಧೂಳೆಬ್ಬಿಸಬೇಕಿದ್ದ ಬಾಲಯ್ಯ ಸದ್ಯ ಕೆಲವು ವಾರಗಳ ಕಾಲ ಕ್ಯಾಮೆರಾ ಕಣ್ಣಿನಿಂದ ದೂರ ಉಳಿಯಲಿದ್ದಾರೆ.
ಇತ್ತ ಪವರ್ ಸ್ಟಾರ್ ಹಾಗೂ ಜನಸೇನಾ ಅಧಿನಾಯಕ ಪವನ್ ಕಲ್ಯಾಣ್ ತಮ್ಮ ಹಳೆಯ ಭುಜದ ನೋವಿನಿಂದ ಮುಕ್ತಿ ಪಡೆಯಲು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಕೀಯ ಪ್ರಚಾರ ಮತ್ತು ಸಿನಿಮಾ ಶೂಟಿಂಗ್‌ಗಳ ದಟ್ಟಣೆಯಿಂದಾಗಿ ಉಲ್ಬಣಗೊಂಡಿದ್ದ ಗಾಯಕ್ಕೆ ಕೊನೆಗೂ ಆಪರೇಷನ್ ಮಾಡಿಸಿಕೊಂಡು ಕಂಪ್ಲೀಟ್ ರೆಸ್ಟ್‌ನಲ್ಲಿದ್ದಾರೆ. ಒಟ್ಟಿನಲ್ಲಿ, ಟಾಲಿವುಡ್ ಸ್ಟಾರ್‌ಗಳು ಸಾಲಾಗಿ ಆಸ್ಪತ್ರೆ ಮೆಟ್ಟಿಲೇರಿರುವುದರಿಂದ ಟಾಲಿವುಡ್ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟದ ಭೀತಿ ಎದುರಾಗಿದ್ದು, ನೆಚ್ಚಿನ ತಾರೆಗಳು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.