ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ, ‘ಜನ ನಾಯಗನ್’ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎಂದು ಘೋಷಿಸಲಾಗಿದೆ. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ವಿಜಯ್ ಅಭಿಮಾನಿಗಳು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದೆ. ಆದರೆ, ವಿದೇಶಿ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ನಿಷೇಧಕ್ಕೆ ಕಾರಣವೇನು ?
ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಬೃಹತ್ ಬೇಡಿಕೆ ಇದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ ‘ಜನ ನಾಯಗನ್’ ಚಿತ್ರಕ್ಕೆ ಸೌದಿ ಅರೇಬಿಯಾ ಸೆನ್ಸಾರ್ ಮಂಡಳಿಯು ನಿಷೇಧ ಹೇರಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಇಸ್ಲಾಂ ಧರ್ಮವನ್ನು ಟೀಕಿಸುವ ಅಥವಾ ಮುಸ್ಲಿಂ ರಾಷ್ಟ್ರಗಳನ್ನು, ಅದರಲ್ಲೂ ವಿಶೇಷವಾಗಿ ಪಾಕಿಸ್ತಾನವನ್ನು ಖಳನಾಯಕನಂತೆ ಬಿಂಬಿಸುವ ಚಿತ್ರಗಳನ್ನು ಗಲ್ಫ್ ರಾಷ್ಟ್ರಗಳು ನಿಷೇಧಿಸುತ್ತಾ ಬಂದಿವೆ.
‘ಜನ ನಾಯಗನ್’ ಚಿತ್ರದ ವಿಲನ್ ಪಾಕಿಸ್ತಾನದ ವ್ಯಕ್ತಿಯಾಗಿದ್ದು, ಸಿನಿಮಾದಲ್ಲಿ ಪಾಕ್ ಸೈನ್ಯದ ವಿರುದ್ಧದ ಸಂಭಾಷಣೆಗಳು ಮತ್ತು ಕೆಲವು ಉಗ್ರಗಾಮಿ ವಿರೋಧಿ ದೃಶ್ಯಗಳಿವೆ ಎನ್ನಲಾಗಿದೆ. ಟ್ರೈಲರ್‌ನಲ್ಲಿಯೂ ಇಂತಹ ಕೆಲವು ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಸೌದಿ ಸೆನ್ಸಾರ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಧುರಂಧರ್’ ಸಿನಿಮಾ ಕೂಡ ಇದೇ ಕಾರಣಕ್ಕೆ ನಿಷೇಧಕ್ಕೊಳಗಾಗಿತ್ತು.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಆದ್ದರಿಂದ, ಚಿತ್ರತಂಡವು ಸೌದಿ ಅರೇಬಿಯಾದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸರ್ವಪ್ರಯತ್ನ ನಡೆಸುತ್ತಿದೆ. ವಿವಾದಾತ್ಮಕ ಸಂಭಾಷಣೆಗಳನ್ನು ಮ್ಯೂಟ್ ಮಾಡುವುದು ಅಥವಾ ಡಿಲೀಟ್ ಮಾಡುವ ಮೂಲಕ ಸೆನ್ಸಾರ್ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ತೆಲುಗಿನ ಹಿಟ್ ಸಿನಿಮಾ ‘ಭಗವಂತ ಕೇಸರಿ’ಯ ರೀಮೇಕ್ ಆಗಿರುವ ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಮೂಲ ಚಿತ್ರದ ಕಥೆಯ ಜೊತೆಗೆ ವಿಜಯ್ ಅವರ ರಾಜಕೀಯ ಜೀವನಕ್ಕೆ ಪೂರಕವಾಗುವಂತಹ ಅನೇಕ ಹೊಸ ದೃಶ್ಯಗಳನ್ನು ಇಲ್ಲಿ ಸೇರಿಸಲಾಗಿದೆ. ಚಿತ್ರದಲ್ಲಿ ವಿಜಯ್ ಅವರ ಸಾಕು ಮಗಳಾಗಿ ‘ಪ್ರೇಮಲು’ ಖ್ಯಾತಿಯ ಮಮಿತಾ ಬಿಜು ನಟಿಸಿದ್ದರೆ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಜನವರಿ 9 ರಂದು ವಿಶ್ವಾದ್ಯಂತ ತೆರೆಕಾಣಲಿರುವ ಈ ಚಿತ್ರವು ದಳಪತಿ ವಿಜಯ್ ಅವರ ಸಿನಿಮಾ ಪಯಣದ ಕೊನೆ ಸಿನಿಮಾವಾಗಿದ್ದು, ಗಲ್ಫ್ ರಾಷ್ಟ್ರಗಳ ಅಡೆತಡೆಗಳನ್ನು ಮೀರಿ ಅಲ್ಲಿನ ಅಭಿಮಾನಿಗಳಿಗೆ ದರ್ಶನ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.
