ಟ್ರೈಲರ್ ರಿಲೀಸ್ ಆಗಿ ಟ್ರೆಂಡಿಂಗ್ ನಂ.1ನಲ್ಲಿದ್ರೂ ಸಹ ಅಂದು ನಡೆದ ಕರಾವಳಿ ಕಿರಿಕ್ ನಿಲ್ಲುವಂತೆ ಕಾಣ್ತಿಲ್ಲ. ಹಣದ ಜೊತೆ ಪ್ರತಿಷ್ಠೆ ಬಿಟ್ಟು, ಸೋಶಿಯಲ್ ಮೀಡಿಯಾ ಪ್ರಮೋಷನ್ಸ್‌ಗೆ ಮುಂದಾದ್ರು ಪ್ರಜ್ವಲ್ ದೇವರಾಜ್. ಆದ್ರೆ ನಿರ್ಮಾಪಕ ಗುರುದತ್ ಗಾಣಿಗ ಈ ಗಲಾಟೆ ಉದ್ದೇಶಪೂರ್ವಕವಾಗಿ ಆಗಿದೆ ಅಂತ ಎಫ್‌ಐಆರ್ ದಾಖಲಿಸೋ ಮೂಲಕ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ನಿಲ್ಲದ ‘ಕರಾವಳಿ’ ಕಿರಿಕ್.. ದಾಖಲಾಯ್ತು ಎಫ್‌ಐಆರ್..!
- ಟ್ರೈಲರ್ ಲಾಂಚ್ ವೇಳೆ ಗಲಾಟೆ ಮಾಡಿದವ್ರ ವಿರುದ್ಧ ಕೇಸ್
- ಪ್ರಜ್ವಲ್ ಕಡೆಯವ್ರಿಂದ ಉದ್ದೇಶಪೂರ್ವಕ ಬೈಗುಳ, ಬೆದರಿಕೆ
- ಗಲಾಟೆ ಮಾಡಿದ್ದು ಅಭಿಮಾನಿಗಳಲ್ಲ.. ಪ್ರಜ್ವಲ್ ಕಡೆಯವರು
ಕರಾವಳಿ.. ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಕನ್ನಡದ ಬಹುನಿರೀಕ್ಷಿತ ಸಿನಿಮಾ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಮಲ್ಟಿ ಸ್ಟಾರ್ ಸಿನಿಮಾಗೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿ, ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಟ್ರೈಲರ್ ಸದ್ಯ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ನಂಬರ್ ಒನ್‌ನಲ್ಲಿದೆ.
ಕರಾವಳಿ ಸಿನಿಮಾ ಇಷ್ಟು ಸದ್ದು ಗದ್ದಲ ಮಾಡೋಕೆ ಕಾರಣ ಆಗಿರೋದು ಚಿತ್ರದ ಗಟ್ಟಿ ಕಥೆ, ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿರೋ ಕಲಾವಿದರುಗಳು ಹಾಗೂ ವ್ಹಾವ್ ಫೀಲ್ ತರಿಸೋ ಮೇಕಿಂಗ್. ಹೌದು.. ಡಬ್ಬಿಂಗ್ ಬಂದ ನಂತ್ರ ಹಾಗೂ ಕೊರೋನಾ ಬಳಿಕ ಚಿತ್ರರಂಗ ಬಹಳಷ್ಟು ಬದಲಾಗಿದೆ. ಜನರಿಗೆ ನಿರೀಕ್ಷೆ ಹೆಚ್ಚಿದೆ. ಏನೇ ಮಾಡಿದ್ರೂ ಮತ್ತೇನನ್ನೋ ನಿರೀಕ್ಷಿಸ್ತಾರೆ. ಹೀಗಿರುವಾಗ ಕರಾವಳಿ ಸಿನಿಮಾ ತನ್ನ ಕಂಟೆಂಟ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.
ಜುಲೈ 24ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಆದ್ರೆ ಟ್ರೈಲರ್ ಲಾಂಚ್‌ನಲ್ಲಿ ಆದಂತಹ ಆ ಕಿರಿಕ್ ಮತ್ತಷ್ಟು ಕಿಚ್ಚು ಹೊತ್ತಿಕೊಂಡಿದೆ. ಹೌದು.. ಸಂಭಾವನೆ ಹಣ ಕಂಪ್ಲೀಟ್ ಆಗಿ ಸೆಟಲ್ ಮಾಡದ ಕಾರಣ ನಾಯಕನಟ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿರಲಿಲ್ಲ. ಪ್ರಜ್ವಲ್ ಬದಲಿಗೆ ಬೇರೆ ಡಬ್ಬಿಂಗ್ ಆರ್ಟಿಸ್ಟ್ ಬಳಿ ವಾಯ್ಸ್ ಡಬ್ ಮಾಡಿ ಟ್ರೈಲರ್ ಲಾಂಚ್ ಮಾಡಿತ್ತು ಚಿತ್ರತಂಡ. ಹೀರೋ ವಾಯ್ಸ್ ಇಲ್ಲ ಅನ್ನೋ ಕಾರಣಕ್ಕೆ ಪ್ರಜ್ವಲ್ ಅಭಿಮಾನಿಗಳು ಬಂದು ಇವೆಂಟ್ ವೇಳೆ ಎಎಂಬಿ ಸಿನಿಮಾಸ್‌ನಲ್ಲಿ ಗಲಾಟೆ ಮಾಡಿದ್ರು.
ಆ ಗಲಾಟೆಯ ನಡುವೆಯೂ ಟ್ರೈಲರ್ ಲಾಂಚ್ ಆಗಿತ್ತು. ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೆಯೂ ಸಹ ಟ್ರೈಲರ್ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆದ್ರೀಗ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸಿದವರ ವಿರುದ್ಧ ಚಿತ್ರತಂಡ ಎಫ್‌ಐಆರ್ ದಾಖಲಿಸಿದೆ. ಹೌದು.. ಅಂದು ಗಲಾಟೆ ಮಾಡಿಸೋ ಉದ್ದೇಶದಿಂದಲೇ ಸ್ವತಃ ಪ್ರಜ್ವಲ್ ದೇವರಾಜ್ ಅವರೇ ತನ್ನ ಹುಡುಗರನ್ನ ಕಳುಹಿಸಿ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಿದ್ದಾರೆ ಅಂತ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದೆ.
ಎಫ್‌ಐಆರ್‌ನಲ್ಲಿ ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಟ್ರೇಲರ್ ರಿಲೀಸ್ ಮಾಡುವ ಸ್ಥಳಕ್ಕೆ ಬಂದಿದ್ದಾರೆ. ಗುಂಪುಸೇರಿಕೊಂಡು ನಿರ್ದೇಶಕ, ನಿರ್ಮಾಪಕ ಹಾಗು ಅಲ್ಲಿದ್ದವರಿಗೆ ತೊಂದರೆ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. BNS ಕಾಯ್ದೆ 352, 292, 3(5) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ವ್ಯವಹಾರದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಪ್ರಜ್ವಲ್ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಿದ್ದಾರೆ. ಅಭಿಮಾನಿಗಳು ಎಂದು ಹೇಳಿಕೊಂಡು ಬಂದು ಗಲಾಟೆ ಮಾಡಿದವರು ಅಭಿಮಾನಿಗಳಲ್ಲ. ಬದಲಾಗಿ ಪ್ರಜ್ವಲ್ ದೇವರಾಜ್ ಜೊತೆಗೆ ಕೆಲಸ ಮಾಡುವವರು ಅಂತ ಉಲ್ಲೇಖಿಸಲಾಗಿದೆ.
ಅವರುಗಳೆಲ್ಲಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುವವರು. ಅವರೇ ಗಲಾಟೆ ಮಾಡಿದ್ದು ಅನ್ನೋ ಆರೋಪ ಮಾಡಿದ್ದು, ಅಭಿಮಾನಿಗಳು ಎಂದು ಹೇಳಿಕೊಂಡು ಬಂದು ಗಲಾಟೆ ಮಾಡಿದ್ದವರು ಕರಾವಳಿ ಸಿನಿಮಾದಲ್ಲಿ ಸಹ ಕೆಲಸ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಪ್ರಜ್ವಲ್ ದೇವರಾಜ್‌ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ ಅಂತ ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿದೆ. ಇದಕ್ಕೆ ಗಲಾಟೆ ಮಾಡಿದವರು ಏನಂತ ಸ್ಪಷ್ಟನೆ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿಯುತ್ತಾ ಅಥ್ವಾ ಇನ್ನೂ ತಾರಕಕ್ಕೇರುತ್ತಾ ಅನ್ನೋದೇ ಯಕ್ಷ ಪ್ರಶ್ನೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
