ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ, ಸಿನಿಮಾದ ಮೂಲಕ ತೆರೆ ಮೇಲೆ ಬರಲಿದೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ರಾಮಾಯಣ’ ಚಿತ್ರದ ಬಿಡುಗಡೆಗೆ ಮುನ್ನವೇ ಭರ್ಜರಿ ಪ್ರಚಾರ ಆರಂಭವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ರೂಪಿಸುತ್ತಿರುವ ಈ ಬಿಗ್‌ಬಜೆಟ್ ಚಿತ್ರಕ್ಕಾಗಿ ನಿರ್ಮಾಪಕರು ದೇಶಾದ್ಯಂತ ಬೃಹತ್ ಶಾಲಾ ಅಭಿಯಾನ ಕೈಗೊಂಡಿದ್ದು, ಜುಲೈ 9ರಿಂದಲೇ ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ದೇಶದ 18 ಪ್ರಮುಖ ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪುವ ಗುರಿಯೊಂದಿಗೆ ಈ ಅಭಿಯಾನ ರೂಪುಗೊಂಡಿದೆ.
ಈ ಕಾರ್ಯಕ್ರಮದ ಮೂಲಕ ಸುಮಾರು 5 ಲಕ್ಷಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ, ಅದರ ನೈತಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಮಹತ್ವವನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲು ರಾಮಾಯಣ ಚಿತ್ರತಂಡ ಮುಂದಾಗಿದೆ. ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತವಾಗದೆ, ಹೊಸ ಪೀಳಿಗೆಗೆ ರಾಮಾಯಣದ ಮೂಲ ಸಾರವನ್ನು ತಲುಪಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಚಿತ್ರದ ತಾರಾಬಳಗದಲ್ಲೂ ಭಾರೀ ಸ್ಟಾರ್ ಕಾಸ್ಟ್ ಇದ್ದು, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಶಾಲಾ ಅಭಿಯಾನವನ್ನು ‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಶೀರ್ಷಿಕೆಯಡಿ ರೂಪಿಸಲಾಗಿದೆ. ಶಾಲೆಗಳಲ್ಲಿ ರೇಖಾಚಿತ್ರ ಸ್ಪರ್ಧೆಗಳು, ರಸಪ್ರಶ್ನೆ ಕಾರ್ಯಕ್ರಮಗಳು, ಸಂವಾದಾತ್ಮಕ ಚಟುವಟಿಕೆಗಳು ಸೇರಿದಂತೆ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ರಾಮಾಯಣದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಜೊತೆಗೆ ಮಕ್ಕಳ ಮೂಲಕ ಕುಟುಂಬಗಳಲ್ಲಿಯೂ ರಾಮಾಯಣದ ಸಾಂಸ್ಕೃತಿಕ ಮತ್ತು ನೈತಿಕ ಮಹತ್ವದ ಬಗ್ಗೆ ಚರ್ಚೆಗಳು ನಡೆಯುವಂತೆ ಪ್ರೇರೇಪಿಸುವ ಉದ್ದೇಶವೂ ಇದೆ.
ಚಿತ್ರತಂಡದ ಪ್ರಕಾರ, ರಾಮಾಯಣವು ಕೇವಲ ಪುರಾಣ ಕಥೆಯಲ್ಲ; ಅದು ಧೈರ್ಯ, ಕರ್ತವ್ಯ, ಪ್ರೀತಿ, ಧರ್ಮ ಮತ್ತು ತ್ಯಾಗದ ಮೌಲ್ಯಗಳನ್ನು ಸಾರುವ ಮಹಾಕಾವ್ಯ. ಆ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥಪೂರ್ಣವಾಗಿ ತಲುಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. “ರಾಮಾಯಣವು ತಲೆಮಾರುಗಳಿಂದ ಕಥೆಗಳು ಮತ್ತು ನೈತಿಕ ಪಾಠಗಳ ಮೂಲಕ ಜೀವಂತವಾಗಿದೆ. ಅದನ್ನು ಇಂದಿನ ಮಕ್ಕಳ ಮನಸ್ಸಿಗೆ ಹತ್ತಿರವಾಗುವ ರೀತಿಯಲ್ಲಿ ತಲುಪಿಸಲು ಈ ಪ್ರಯತ್ನ” ಎಂದು ಚಿತ್ರತಂಡ ತಿಳಿಸಿದೆ.
‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಈ ಮಹತ್ವಾಕಾಂಕ್ಷಿ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ಬಿಡುಗಡೆಯಿಗೆ ಇನ್ನೂ ಸಮಯ ಇದ್ದರೂ, ಈಗಾಗಲೇ ಆರಂಭಿಸಿರುವ ಈ ಶಾಲಾ ಅಭಿಯಾನ ‘ರಾಮಾಯಣ’ ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಚಾರ ತಂದುಕೊಟ್ಟಿದೆ.
