ತೇರೆ ಇಷ್ಕ್ ಮೈನ್.. ಸದ್ಯ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸಿನಿಮಾ. ತಮಿಳು ನಟ ಧನುಷ್ ಹಾಗೂ ಕೃತಿ ಸನನ್ ಜೋಡಿಯ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಇದಾಗಿದ್ದು, ರಿಲೀಸ್ ಆದ ಐದೇ ದಿನದಲ್ಲಿ 100 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಇಷ್ಟಕ್ಕೂ ಸಿನಿಮಾದಲ್ಲಿ ಅಂಥದ್ದೇನಿದೆ ಅಂತೀರಾ..? ಇಲ್ಲಿದೆ ನೋಡಿ
- ಐದೇ ದಿನಕ್ಕೆ 100 ಕೋಟಿ.. ಧನುಷ್ ‘ತೇರೆ ಇಷ್ಕ್ ಮೈನ್’
- ಸಕ್ಸಸ್‌ನ ಉತ್ತುಂಗದಲ್ಲಿ ರಜನೀಕಾಂತ್ ಮಾಜಿ ಅಳಿಮಯ್ಯ
- ಆನಂದ್ ಎಲ್ ರಾಯ್ ಜೊತೆ ಧನುಷ್ ಹ್ಯಾಟ್ರಿಕ್ ಹಿಟ್
- ಇಂಟೆನ್ಸ್ ಲವ್, ಎಮೋಷನಲ್, ಮ್ಯೂಸಿಕಲ್ ಡ್ರಾಮಾ..!
ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರೋ ಸ್ಟಾರ್‌ಗಳಲ್ಲಿ ತಮಿಳು ನಟ ಧನುಷ್ ಕೂಡ ಒಬ್ಬರು. ಬರೀ ತಮಿಳು ಚಿತ್ರಗಳಿಗೆ ಅಂಟಿಕೊಂಡು ಕೂರದ ಇವರು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹೀಗೆ ಎಲ್ಲಾ ಚಿತ್ರರಂಗಗಳಲ್ಲಿ ಬಹುದೊಡ್ಡ ಛಾಪು ಮೂಡಿಸಿದ್ದಾರೆ. ಇವ್ರ ನಟನೆಗೆ ಸೆಪರೇಟ್ ಫ್ಯಾನ್ ಬೇಸ್ ಇದೆ. ರಾಯನ್ ಚಿತ್ರದಿಂದ 50 ಸಿನಿಮಾಗಳನ್ನ ಕಂಪ್ಲೀಟ್ ಮಾಡಿರೋ ಧನುಷ್, ಅದಾದ ಬಳಿಕ ಮಾಡಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್.
ಕುಬೇರ, ಇಡ್ಲಿ ಕಡೈ ಹಿಟ್ ಆಗ್ತಿದ್ದಂತೆ ಬಾಲಿವುಡ್ ಸಿನಿಮಾ ತೇರೆ ಇಷ್ಕ್ ಮೈನ್ ಕೂಡ ತೆರೆಗಪ್ಪಳಿಸಿದೆ. ಇಂಟೆನ್ಸ್ ರೊಮ್ಯಾಂಟಿಕ್ ಆ್ಯಂಡ್ ಮ್ಯೂಸಿಕ್ ಡ್ರಾಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಚಿತ್ರಪ್ರೇಮಿಗಳ ಹಾರ್ಟ್ ಗೆದ್ದಿದೆ ತೇರೆ ಇಷ್ಕ್ ಮೈನ್. ಹೌದು.. ನವೆಂಬರ್ 28ರಂದು ತೆರೆಕಂಡ ಈ ಸಿನಿಮಾ, ಐದೇ ದಿನದಲ್ಲಿ ಬರೋಬ್ಬರಿ 100 ಕೋಟಿ ಕ್ಲಬ್ ಸೇರಿದ್ದು, ಬಾಲಿವುಡ್ ಮಂದಿಯೇ ಈ ಕಲೆಕ್ಷನ್ ನೋಡಿ ದಂಗಾಗಿದ್ದಾರೆ. ಅಷ್ಟರ ಮಟ್ಟಿಗೆ ಮೋಡಿ ಮಾಡ್ತಿದೆ ಧನುಷ್-ಕೃತಿ ಸನನ್ ಜೋಡಿ.
ಇವರಿಬ್ಬರ ನಡುವಿನ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ಡೈರೆಕ್ಟರ್ ಆನಂದ್ ಎಲ್ ರಾಯ್ ಜೊತೆ ಧನುಷ್ ಹ್ಯಾಟ್ರಿಕ್ ಹೀಟ್ ಕೂಡ ಹೊಡೆದಿದ್ದಾರೆ. ಹೌದು.. ಈ ಹಿಂದೆ ರಾಂಜ್ಹಾನಾ, ಅತ್ರಾಂಗಿ ರೇ ಸಿನಿಮಾಗಳಿಗೆ ಇದೇ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳಿದ್ರು. ಇದೀಗ ತೇರೆ ಇಷ್ಕ್ ಮೈನ್‌ಗೂ ಆನಂದ್ ಅವರೇ ನಿರ್ದೇಶನ ಮಾಡಿದ್ದು, ಈ ಕಾಂಬೋ ಗ್ರೇಟೆಸ್ಟ್ ಕಾಂಬೋ ಅನಿಸಿಕೊಳ್ತಿದೆ. ಯೂತ್‌ಫುಲ್ ಸಬ್ಜೆಕ್ಟ್ ಆಗಿರೋ ತೇರೆ ಇಷ್ಕ್ ಮೈನ್ ಚಿತ್ರ ಹೆಂಗೆಳೆಯರಿಗೆ ಅದ್ರಲ್ಲೂ ಸ್ಕೂಲ್ ಹಾಗೂ ಕಾಲೇಜ್ ಹುಡುಗರಿಗೆ ಫೇವರಿಟ್ ಮೂವಿ ಅನಿಸಿಕೊಂಡಿದೆ.
ಮ್ಯೂಸಿಕಲಿ ಸಾಂಗ್ಸ್ ದೊಡ್ಡ ಇಂಪ್ಯಾಕ್ಟ್ ಮಾಡಿದ್ದು, ಒಂದೊಂದು ಹಾಡು ಕೂಡ ಪದೇ ಪದೆ ನೋಡಬೇಕೆನಿಸುವಂತಿವೆ. ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಹಾಡುಗಳಾಗಿದ್ದು, ಕಿವಿಗೂ ಇಂಪು.. ಕಣ್ಣಿಗೂ ತಂಪು. ಇಂಟರೆಸ್ಟಿಂಗ್ ಅಂದ್ರೆ ನಮ್ಮ ಕನ್ನಡದ ಪ್ರಕಾಶ್ ರೈ ಕೂಡ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





