ಮುಂಬೈ: ಬಾಲಿವುಡ್‌ನ ಕ್ಯೂಟ್ ಕಪಲ್ ಎಂದೇ ಖ್ಯಾತರಾಗಿರುವ ನಟಿ ತಾರಾ ಸುತಾರಿಯಾ ಮತ್ತು ವೀರ್ ಪಹಾರಿಯಾ ನಡುವೆ ಎಲ್ಲವೂ ಸರಿ ಇಲ್ಲ, ಇಬ್ಬರೂ ದೂರಾಗಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ನಟಿ ತಾರಾ ಸುತಾರಿಯಾ ತಮ್ಮ ಒಂದೇ ಒಂದು ಫೋಟೋ ಮೂಲಕ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಸಂಗತಿ ಈ ರೂಮರ್ಸ್‌ಗೆ ಕಾರಣವಾಗಿತ್ತು. ಶೋನಲ್ಲಿ ವೇದಿಕೆಯ ಮೇಲೆ ತಾರಾ ಮತ್ತು ಎಪಿ ಧಿಲ್ಲೋನ್ ಪರಸ್ಪರ ಜೊತೆಗಿರುವ ಹಾಗೂ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ಪ್ರೇಕ್ಷಕರ ಸಾಲಿನಲ್ಲಿದ್ದ ಗೆಳೆಯ ವೀರ್ ಪಹಾರಿಯಾ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಮತ್ತು ಇದೇ ಕಾರಣಕ್ಕೆ ಇಬ್ಬರ ಸಂಬಂಧ ಮುರಿದುಬಿದ್ದಿದೆ ಎಂಬ ಚರ್ಚೆಗಳು ಸಿನಿರಂಗದಲ್ಲಿ ಕೇಳಿಬಂದಿತ್ತು.
ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ ತಾರಾ
ತಮ್ಮ ವಿರುದ್ಧದ ಟೀಕೆಗಳು ಮತ್ತು ಪ್ರೀತಿ ಮುರಿದುಬಿದ್ದ ಸುದ್ದಿಗಳು ಮಿತಿಮೀರುತ್ತಿದ್ದಂತೆಯೇ ತಾರಾ ಸುತಾರಿಯಾ ಮೌನ ಮುರಿದಿದ್ದಾರೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫ್ರೆಂಡ್ ಓರಿ (Orry) ಹಂಚಿಕೊಂಡಿದ್ದ ವಿಶೇಷ ಫೋಟೋ ಒಂದನ್ನು ತಾರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮರುಹಂಚಿಕೊಂಡಿದ್ದಾರೆ. ಈ ಫೋಟೋ ಕೊಲಾಜ್‌ನಲ್ಲಿ ತಾರಾ ಮತ್ತು ವೀರ್ ಪಹಾರಿಯಾ ಇಬ್ಬರೂ ಓರಿ ಜೊತೆಗೆ ಅತ್ಯಂತ ಆತ್ಮೀಯವಾಗಿ ಪೋಸ್ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಈ ಫೋಟೋಗೆ “ನನ್ನ ಹೃದಯಗಳು” (Aww my hearts) ಎಂದು ಬರೆದು ಕೆಂಪು ಹೃದಯದ ಎಮೋಜಿಗಳನ್ನು ಬಳಸಿದ್ದಾರೆ. ಈ ಮೂಲಕ ವೀರ್ ಪಹಾರಿಯಾ ಈಗಲೂ ತಮ್ಮ ಜೀವನದ ಅವಿಭಾಜ್ಯ ಅಂಗ ಮತ್ತು ತಾವಿಬ್ಬರೂ ಪ್ರೀತಿಯಿಂದಲೇ ಇದ್ದೇವೆ ಎಂದು ಗಾಸಿಪ್‌ಗಲಿಗೆ ಉತ್ತರಕೊಟ್ಟಿದ್ದಾರೆ.
ಇನ್ನೂ ತಾರಾ ಸುತಾರಿಯಾ ಅವರು ಕನ್ನಡಿಗರ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಅಂತಹ ಸ್ಟಾರ್ ನಟಿಯರ ಜೊತೆ ತಾರಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ 2026ರ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಕಾಣಲಿದೆ.
ಇತ್ತ ವೀರ್ ಪಹಾರಿಯಾ ಕೂಡ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಮೂಲಕ ಎಂಟ್ರಿ ಕೊಟ್ಟಿರುವ ಅವರು, ಮುಂದಿನ ದಿನಗಳಲ್ಲಿ ಮಾಧುರಿ ದೀಕ್ಷಿತ್ ಮತ್ತು ತೃಪ್ತಿ ದಿಮ್ಮಿ ನಟನೆಯ ‘ಮಾ ಬೆಹನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.





