ಚೆನ್ನೈ: ತಮಿಳು ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರಾದ ಮತ್ತು ನಿರ್ಮಾಪಕ ವಿಶಾಲ್ ಕೃಷ್ಣನ್ ಅವರು (Vishal) ತಮ್ಮ ಬ್ಯಾಚುಲರ್ ಜೀವನಕ್ಕೆ ವಿದಾಯ ಹೇಳಲು ಸಿದ್ಧರಾಗಿದ್ದಾರೆ. 48ನೇ ವಯಸ್ಸಿನಲ್ಲಿ ನಟಿ ಸಾಯಿ ಧನ್ಸಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕುಟುಂಬದ ಸದಸ್ಯರು ಮತ್ತು ಆಪ್ತ ಮಿತ್ರರ ಮಧ್ಯೆ ಚೆನ್ನೈನಲ್ಲಿ ಈ ನಿಶ್ಚಿತಾರ್ಥ ನಡೆಯಿತು. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅಭಿಮಾನಿಗಳು ಮತ್ತು ಸಹ ಕಲಾವಿದರು ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ವಿಶಾಲ್ ಮತ್ತು ಧನ್ಸಿಕಾ ತಮ್ಮ ಪ್ರೀತಿಯನ್ನು ಈ ವರ್ಷದ ಮೇ ತಿಂಗಳಲ್ಲಿ ‘ಯೋಗಿ ದಾ’ ಚಿತ್ರದ ಸಮಾರಂಭದಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಆಗಸ್ಟ್ 29ರಂದು ಮದುವೆಯಾಗುವುದಾಗಿ ಘೋಷಿಸಿದ್ದರೂ, ಕಲಾವಿದ ಸಂಘದ ಕಾರ್ಯದರ್ಶಿಯಾಗಿರುವ ವಿಶಾಲ್, ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಯ ನಂತರ ಮದುವೆಯಾಗುವ ಯೋಜನೆಯನ್ನು ಹೊಂದಿದ್ದರು. ಆದರೆ, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿ ಮದುವೆ ದಿನಾಂಕವನ್ನು ಘೋಷಿಸಲಿದ್ದಾರೆ.
ವಿಶಾಲ್ 2004ರಲ್ಲಿ ‘ಸೆಲ್ಲಮೆ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಲಿಂಗುಸ್ವಾಮಿ ನಿರ್ದೇಶನದ ‘ಸಂಡಕೋಳಿ’ ಚಿತ್ರವು ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ‘ತಿಮಿರು’, ‘ತಾಮಿರಬರಣಿ’, ‘ತೀರದ ವಿಲೈಯತ್ತು ಪಿಳ್ಳೆ’, ‘ಅವನ್ ಇವನ್’, ‘ಪಾಂಡಿಯ ನಾಡು’, ‘ಪೂಜಾ’, ‘ಮರುದು’, ಮತ್ತು ‘ತುಪ್ಪರಿವಾಲನ್’ ಮುಂತಾದ ಚಿತ್ರಗಳ ಮೂಲಕ ವಿಶಾಲ್ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಸಾಯಿ ಧನ್ಸಿಕಾ ತಮಿಳುನಾಡಿನ ತಂಜಾವೂರಿನವರು. 2006ರಲ್ಲಿ ‘ಮನತೋಡು ಮಜೈಕಾಲಂ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2009ರಲ್ಲಿ ‘ಕೆಂಪಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಕಬಾಲಿ’ ಚಿತ್ರದಲ್ಲಿ ರಜನಿಕಾಂತ್ ಅವರ ಮಗಳ ಪಾತ್ರದಲ್ಲಿ ನಟಿಸಿ ಜನಮನ್ನಣೆ ಗಳಿಸಿದರು. “ಕಳೆದ ಕೆಲವು ವರ್ಷಗಳಿಂದ ನಾವು ಸ್ನೇಹಿತರಾಗಿದ್ದೇವೆ, ನಂತರ ಪ್ರೀತಿಯ ಸಂಬಂಧವಾಯಿತು” ಎಂದು ಧನ್ಸಿಕಾ ಹೇಳಿಕೊಂಡಿದ್ದಾರೆ.