ಭಾರಿ ವಿವಾದದ ಬಳಿಕ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಕಾರ್ಯಕ್ರಮ ರದ್ದು

Untitled design 2025 12 30T224315.542

ಮಥುರಾ: ಹೊಸ ವರ್ಷದ ಸ್ವಾಗತಕ್ಕಾಗಿ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿದ್ದರೆ, ಇತ್ತ ಉತ್ತರ ಪ್ರದೇಶದ ಪವಿತ್ರ ಕ್ಷೇತ್ರ ಮಥುರಾದಲ್ಲಿ ನಿಗದಿಯಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಅದ್ಧೂರಿ ಕಾರ್ಯಕ್ರಮವೊಂದು ರದ್ದಾಗಿದೆ. ಶ್ರೀಕೃಷ್ಣನ ಜನ್ಮಭೂಮಿಯ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಹಿಂದೂ ಸಂಘಟನೆಗಳು ಮತ್ತು ಸ್ವಾಮೀಜಿಗಳು ನಡೆಸಿದ ತೀವ್ರ ಹೋರಾಟದ ಫಲವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಥುರಾದ ಖಾಸಗಿ ಹೋಟೆಲ್ ಒಂದರಲ್ಲಿ ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸನ್ನಿ ಲಿಯೋನ್ ಅವರ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು ಮತ್ತು ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿತ್ತು. ಆದರೆ, ಈ ಸುದ್ದಿ ಹರಡುತ್ತಿದ್ದಂತೆಯೇ ಬ್ರಜ್ ಭೂಮಿಯಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿಕೊಂಡಿತು.

ಮಥುರಾ ಮತ್ತು ವೃಂದಾವನ ಪ್ರದೇಶಗಳು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಸ್ಥಳಗಳು. ಈ ಪುಣ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮದ್ಯ ಮತ್ತು ಅಶ್ಲೀವಾಗಿ ನೃತ್ಯ ಮಾಡುವ ಸಂಸ್ಕೃತಿಗೆ ಅವಕಾಶ ನೀಡಬಾರದು ಎಂದು ಸ್ಥಳೀಯ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಇಂತಹ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರದರ್ಶನ ದೇವಸ್ಥಾನದ ಆವರಣದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತದೆ ಎಂಬುದು ಪ್ರತಿಭಟನಾಕಾರರ ವಾದವಾಗಿತ್ತು.

ಮಥುರಾ ಶ್ರೀಕೃಷ್ಣ ಜನ್ಮಭೂಮಿಯ ಸ್ವಾಮೀಜಿಗಳು ಈ ಹೋರಾಟಕ್ಕೆ ಕೈಜೋಡಿಸಿದ್ದು, ಕಾರ್ಯಕ್ರಮದ ವಿರುದ್ಧ ಬೃಹತ್ ಆಂದೋಲನ ರೂಪಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತಿರುವುದನ್ನು ಗಮನಿಸಿದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹೋಟೆಲ್ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮ ಆಯೋಜಕರು, ಸರ್ಕಾರದ ಸೂಚನೆಯ ಮೇರೆಗೆ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ಮಥುರಾದ ಭಕ್ತರು ಮತ್ತು ಸ್ವಾಮೀಜಿಗಳು ಮತ್ತು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಶ್ರೀಕೃಷ್ಣನ ಊರಿನ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭಕ್ತರ ನಂಬಿಕೆಗೆ ಗೌರವ ನೀಡಿ ಕಾರ್ಯಕ್ರಮ ರದ್ದುಗೊಳಿಸಿದ ಸರ್ಕಾರಕ್ಕೆ ಧನ್ಯವಾದಗಳು ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಸನ್ನಿ ಲಿಯೋನ್ ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಮೂಡಿಸಿದ್ದರೂ, ಧಾರ್ಮಿಕ ದೃಷ್ಟಿಕೋನದಿಂದ ಈ ಕ್ರಮವು ಅನಿವಾರ್ಯವಾಗಿತ್ತು ಎನ್ನಲಾಗಿದೆ.

Exit mobile version