ಶ್ರೀಮುರಳಿ ಪರಾಕ್..ಬೆಣ್ಣೆನಗರಿ ಸ್ಟೂಡೆಂಟ್ಸ್ ಪೋಸ್ಟರ್‌‌‌‌ ರೆಕಾರ್ಡ್

5 ಸಾವಿರ ಮಕ್ಕಳ ಕಲಾಕುಂಚದಲ್ಲಿ ರೋರಿಂಗ್ ಸ್ಟಾರ್ ಪೋಸ್ಟರ್

Untitled Design 2026 11 24T171211.201

ರೋರಿಂಗ್ ಸ್ಟಾರ್ ಶ್ರೀಮುರಳಿ ಪರಾಕ್ ಸಿನಿಮಾದ ಶೂಟಿಂಗ್ ಎಷ್ಟಾಗಿದೆ..? ಸಿನಿಮಾ ರಿಲೀಸ್ ಯಾವಾಗ..? ಯಾಕೆ ಡೈರೆಕ್ಟರ್ ಏನೂ ಅಪ್ಡೇಟ್ಸ್ ಕೊಡ್ತಿಲ್ಲ ಅಂತ ಎಲ್ರೂ ಪ್ರಶ್ನೆ ಮಾಡೋ ಸಮಯಕ್ಕೆ ನಯಾ ಅಪ್ಡೇಟ್ ಹೊತ್ತು ಬಂದಿದ್ದಾರೆ ಹಾಲೇಶ್. ಐದು ಸಾವಿರ ಶಾಲಾ ಮಕ್ಕಳ ಕಲಾಕುಂಚದಲ್ಲಿ ಅರಳಿದ ಮುರಳಿ ಪರಾಕ್ ಪೋಸ್ಟರ್ ವೈಭೋಗ ಇಲ್ಲಿದೆ ನೋಡಿ…

ಮಕ್ಕಳ ದಿನಾಚರಣೆಯ ವಿಶೇಷ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರಾಕ್ ಚಿತ್ರದ ಪೋಸ್ಟರ್ ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ ದಾವಣಗೆರೆಯ ಶಾಲಾ ಮಕ್ಕಳು. ಯೆಸ್.. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಹಾಲೇಶ್ ಕೋಗುಂಡಿ ನಿರ್ದೇಶನದ ಬಹುನಿರೀಕ್ಷಿತ ಪರಾಕ್ ಸಿನಿಮಾಗೆ ದಾವಣಗೆರೆಯ ಶಾಲಾ ಮಕ್ಕಳು ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಪ್ರತಿಷ್ಠಿತ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಕಲಾಕುಂಚದ ಮೂಲಕ ಪರಾಕ್ ಚಿತ್ರದ ಪೋಸ್ಟರ್‌‌ನ ಅದ್ಭುತವಾಗಿ ಬಿಡಿಸುವ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ರಚಿಸಿರೋದು ಮತ್ತೊಂದು ವಿಶೇಷ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಾವಿರಾರು ಮಕ್ಕಳ ಈ ವಿನೂತನ ಪ್ರಯತ್ನ ಮತ್ತು ಕಲಾ ಪ್ರದರ್ಶನ ನೆರೆದಿದ್ದವರನ್ನು ನಿಬ್ಬೆರಗಾಗಿಸಿತು. ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಿದಂತಹ ಪರಾಕ್ ಡೈರೆಕ್ಟರ್ ಹಾಲೇಶ್ ಕೋಗುಂಡಿಗೆ.. ತಾವು ಕಲಿತ ಶಾಲೆಯ ವಿದ್ಯಾರ್ಥಿಗಳೇ ತಮ್ಮ ಸಿನಿಮಾದ ಪೋಸ್ಟರ್ ಬಿಡಿಸಿ, ವಿಶೇಷ ಗೌರವ ಹಾಗೂ ಅಭಿನಂದನೆ ಸಲ್ಲಿಸಿರುವುದು ನಿರ್ದೇಶಕರ ಸಂತಸವನ್ನು ಇಮ್ಮಡಿಗೊಳಿಸಿದೆ.

ತಮ್ಮ ಹಳೆಯ ವಿದ್ಯಾರ್ಥಿಯ ಸಿನಿಮಾ ಯಶಸ್ವಿಯಾಗಲಿ ಅಂತ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಾವಿರಾರು ಮಂದಿ ವಿದ್ಯಾರ್ಥಿಗಳು ಚಿತ್ರಕಲೆಯ ಮೂಲಕ ಶುಭ ಕೋರಿದ್ದಾರೆ. ಅಂದಹಾಗೆ ಪರಾಕ್ ಟೀಸರ್‌ ಸಖತ್ ಮಾಸ್ ಆಗಿದ್ದು, ಫಸ್ಟ್‌ಲುಕ್ ಪೋಸ್ಟರ್‌‌ಗಳಂತೆ ಟೀಸರ್ ಕೂಡ ಎಲ್ಲರ ಹುಬ್ಬೇರಿಸಿತ್ತು. ರೆಟ್ರೋ ಸಾಂಗ್.. ಮೆಟ್ರೋ ಫೈಟ್‌‌ನಿಂದ ಮಾಸ್‌‌ಪ್ರಿಯರ ಹಾಗೂ ಸಂಗೀತ ಪ್ರಿಯರ ದಿಲ್‌ ದೋಚಿತ್ತು. ಸದ್ಯದಲ್ಲೇ ಚಿತ್ರದ ನಯಾ ಅಪ್ಡೇಟ್ ಮೂಲಕ ಟೀಂ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version