ನಟ ನೆನಪಿರಲಿ ಪ್ರೇಮ್ ಅವರ ಹುಟ್ಟುಹಬ್ಬದಂದು ಅವರ ಅಭಿನಯದ ಹೊಸ ಸಿನಿಮಾ ‘ಸ್ಪಾರ್ಕ್’ನ ಮಾಸ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನೆನಪಿರಲಿ ಪ್ರೇಮ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿಕೊಂಡಿದ್ದಾರೆ. ಆದರೆ, ಈ ಪೋಸ್ಟರ್ ಬಿಡುಗಡೆಯಾದ ನಂತರ ಅದು ವಿವಾದಕ್ಕೆ ಕಾರಣವಾಗಿದೆ.
ಪೋಸ್ಟರ್‌ನಲ್ಲಿ ನೆನಪಿರಲಿ ಪ್ರೇಮ್ ಕೈಯಲ್ಲಿ ಒಬ್ಬ ರಾಜಕಾರಣಿಯ ಫೋಟೋವನ್ನು ಹಿಡಿದುಕೊಂಡು ಅದಕ್ಕೆ ಸಿಗಾರ್‌ನಿಂದ ಬೆಂಕಿ ಹಚ್ಚುತ್ತಿರುವ ದೃಶ್ಯವೂ ಇದೆ. ಈ ರಾಜಕಾರಣಿಯ ಫೋಟೋ ನಟ ರಮೇಶ್ ಇಂದಿರಾ ಅವರದ್ದೇ ಆಗಿದ್ದು, ಈ ಸಂಗತಿ ಇದೀಗ ವಿವಾದಕ್ಕೆ ಕಾರಣವಾಗಿದೆ.
ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು, ರಮೇಶ್ ಇಂದಿರಾ ಅವರ ಪತ್ನಿಯಾಗಿದ್ದು, ಈ ಪೋಸ್ಟರ್ ಬಗ್ಗೆ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ. “ನಟನ ಫೋಟೋವನ್ನು ಅವರ ಅನುಮತಿ ಇಲ್ಲದೆ ಬಳಸುವುದು ಅನೈತಿಕ. ಅಲ್ಲದೇ ಅವರ ಚಿತ್ರವನ್ನು ದುಷ್ಕರ್ಮಿಯಂತೆ ತೋರಿಸುವುದು ಅಪಮಾನಕಾರಿಯಾಗಿದೆ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಮೂಲಕ ಅವರು ಕಾನೂನು ಕ್ರಮ ಕೈಗೆತ್ತಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಪೋಸ್ಟರ್‌ನಲ್ಲಿ ಬಳಸಿದ ರಮೇಶ್ ಇಂದಿರಾ ಅವರ ಚಿತ್ರ ‘ಸ್ಪಾರ್ಕ್’ ಸಿನಿಮಾದ್ದು ಅಲ್ಲದೆ, ಅವರು ನಟಿಸಿರುವ ಇನ್ನೊಂದು ಸಿನಿಮಾ ‘ಭೀಮಾ’ದ ಪೋಸ್ಟರ್‌ನಿಂದ ತೆಗೆದುಕೊಳ್ಳಲಾಗಿದೆ. ಈ ಚಿತ್ರದ ನಿರ್ದೇಶಕ ಅಥವಾ ನಿರ್ಮಾಪಕರ ಅನುಮತಿ ಪಡೆಯದೇ ‘ಸ್ಪಾರ್ಕ್’ ತಂಡ ಅವರ ಈ ಫೋಟೋವನ್ನು ಬಳಸಿರುವುದು ಸರಿಯಲ್ಲ ಎಂನದು ಹೇಳಿದ್ದಾರೆ.
ಈ ವಿವಾದಕ್ಕೆ ನಟ ನೆನಪಿರಲಿ ಪ್ರೇಮ್ ಪ್ರತಿಕ್ರಿಯೆ ನೀಡಿದ್ದು, “ಈ ವಿಚಾರದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನಾನು ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ತೊಡಗಿದ್ದರಿಂದ ನಿರ್ದೇಶಕರ ಜೊತೆ ಈ ಕುರಿತು ಮಾತಾಡಲಾಗಿಲ್ಲ. ಆದ್ದರಿಂದ ಈ ವಿಷಯ ಏನು ಅಂತಾ ತಿಳ್ಕೊಂಡು ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.