ಆಂಧ್ರದ ರಿಯಲ್ ಹೀರೋ ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ನಮ್ಮ ಲಿವಿಂಗ್ ಲೆಜೆಂಡ್ ಶಿವರಾಜ್‌ಕುಮಾರ್ ನಟಿಸ್ತಿರೋದು ಎಲ್ರಿಗೂ ಗೊತ್ತೇಯಿದೆ. ಅದ್ರ ಮುಹೂರ್ತ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದ್ದು, ಹೈದ್ರಾಬಾದ್ ಬಿಟ್ಟು ಗುಮ್ಮಡಿ ನರಸಯ್ಯ ಊರಲ್ಲೇ ಸಿನಿಮಾ ಲಾಂಚ್ ಆಗ್ತಿದೆ. ಇದು ಡೈರೆಕ್ಟರ್ ಅಥ್ವಾ ಹೀರೋ ತೆಗೆದುಕೊಂಡ ನಿರ್ಧಾರವಲ್ಲ. ನಮ್ಮ ಶಿವಣ್ಣ ಬರೆದ ಶಾಸನ.
ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಬಾರಿ MLA ಆಗಿ ಜನಸೇವೆ ಮಾಡಿದ ಆಂಧ್ರದ ರಿಯಲ್ ಹೀರೋ ಒಬ್ಬರ ನೈಜ ಕಥೆಯೊಂದು ಬಯೋಪಿಕ್ ಆಗಿ ಬೆಳ್ಳಿತೆರೆ ಬೆಳಗಲು ಮೊದಲ ಹೆಜ್ಜೆ ಇಡ್ತಿದೆ. ಅದೇ ಗುಮ್ಮಡಿ ನರಸಯ್ಯ. ಆ ಟೈಟಲ್ ರೋಲ್‌ನಲ್ಲಿ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ನಟಿಸುತ್ತಿರೋದು ವಿಶೇಷ. ಆ ಹೀರೋನೇ ಗುಮ್ಮಡಿ ನರಸಯ್ಯ. ಯೆಸ್.. ಅಖಂಡ ಆಂಧ್ರದ ಜನ ನಾಯಕ, ಆದಿವಾಸಿಗಳ ಆತ್ಮಬಂಧು ಆಗಿ ಪ್ರಖ್ಯಾತಿ ಪಡೆದವರು ಗುಮ್ಮಡಿ ನರಸಯ್ಯ. ವೈ ಎಸ್ ರಾಜಶೇಖರರೆಡ್ಡಿ, ಚಂದ್ರಬಾಬು ನಾಯ್ಡು ಅಂತಹ ಘಟಾನುಘಟಿ ಲೀಡರ್‌ಗಳ ಪಕ್ಷಗಳಿಂದ ಕಂಟೆಸ್ಟ್ ಮಾಡಿದ ಅಭ್ಯರ್ಥಿಗಳನ್ನ ಸೋಲಿಸಿ, ಶಾಸಕರಾದವರು ಗುಮ್ಮಡಿ ನರಸಯ್ಯ.
ಗುಮ್ಮಡಿ ನರಸಯ್ಯ ಊರಲ್ಲೇ ಮುಹೂರ್ತ.. ‘ಶಿವ’ ಶಾಸನ
ಡಿ-6ಕ್ಕೆ ರಿಯಲ್ ಹೀರೋ ಹುಟ್ಟಿ ಬೆಳೆದ ಕುಗ್ರಾಮದಲ್ಲಿ ಪೂಜೆ
ಶ್ರೀಸಾಮಾನ್ಯನಂತೆ ಎಲ್ಲರೊಂದಿಗೆ ಇದ್ದುಕೊಂಡು ಪ್ರಜಾಸೇವೆ ಮಾಡುತ್ತಲೇ, ಜನಪ್ರಿಯ ಶಾಸಕರಾದವರು ಗುಮ್ಮಡಿ ನರಸಯ್ಯ. ಈಗಿನ ತೆಲಂಗಾಣದ ಯೆಲ್ಲಾಂಡು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಎಂಎಲ್‌ಎ ಆಗಿ ಮಿಂಚಿದವರ ಜೀವನಗಾಥೆ ಸದ್ಯ ಸಿನಿಮಾ ಆಗ್ತಿದೆ. ಗುಮ್ಮಡಿ ನರಸಯ್ಯ ಹೆಸರಲ್ಲೇ ಸಿನಿಮಾ ಆಗ್ತಿದ್ದು, ಆ ಟೈಟಲ್ ರೋಲ್‌ಗೆ ಜೀವ ತುಂಬುತ್ತಿದ್ದಾರೆ ನಮ್ಮ ಶಿವಣ್ಣ.
ಶ್ರೀಸಾಮಾನ್ಯನಾಗಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರ ಹೋರಾಟಗಳಲ್ಲಿ ತಾನೂ ಪಾಲ್ಗೊಂಡು, ಜನರ ಧ್ವನಿಗೆ ಶಕ್ತಿಯಾಗಿ ನಿಂತವರು ಗುಮ್ಮಡಿ ನರಸಯ್ಯ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಇವರು, ಎಂದೂ ತಮ್ಮ ಸಿದ್ಧಾಂತಗಳನ್ನ ಬಿಟ್ಟು ರಾಜಕಾರಣ ಮಾಡಿದವರಲ್ಲ. ಸೈಕಲ್‌ನೇ ಬೆಂಜ್ ಕಾರ್, ಆಡಿ ಕಾರ್‌ನಂತೆ ಫೀಲ್ ಮಾಡಿದವರು. ಆಂಧ್ರ ಪ್ರದೇಶದ ಪಾರ್ಲಿಮೆಂಟ್‌ನಲ್ಲಿ ತನ್ನದೇ ಆದ ಛಾಪನ್ನು ಒತ್ತಿದವರು. ಸದ್ಯ ಅವ್ರ ಬಯೋಗ್ರಫಿಗೆ ಶಿವಣ್ಣ ನಾಯಕನಟನಾಗಿ ಬಣ್ಣ ಹಚ್ಚುತ್ತಿದ್ದು, ಥೇಟ್ ಗುಮ್ಮಡಿ ನರಸಯ್ಯನಂತೆ ಕಾಣಸಿಗುತ್ತಿದ್ದಾರೆ ಸ್ಯಾಂಡಲ್‌ವುಡ್ ಲೀಡರ್.
ಇದೇ ಡಿಸೆಂಬರ್ 6ರಂದು ಗುಮ್ಮಡಿ ನರಸಯ್ಯ ಚಿತ್ರ ಮುಹೂರ್ತ ಸಮಾರಂಭ ನೆರವೇರಲಿದ್ದು, ಹೈದ್ರಾಬಾದ್‌ನಲ್ಲಿ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಸಾಕಷ್ಟು ಮಂದಿ ಟಾಲಿವುಡ್ ಸ್ಟಾರ್‌ಗಳು ಹಾಗೂ ಪೊಲಿಟಿಷಿಯನ್ಸ್ ಅದಕ್ಕೆ ಸಾಕ್ಷಿ ಆಗಬೇಕಿತ್ತು. ಆದ್ರೀಗ ಹೈದ್ರಾಬಾದ್‌ನಿಂದ ಈ ಪೂಜಾ ಕಾರ್ಯಕ್ರಮ ಬೇರೆಡೆಗೆ ಶಿಫ್ಟ್ ಆಗಿದೆ. ಹೌದು.. ಗುಮ್ಮಡಿ ನರಸಯ್ಯ ಹುಟ್ಟಿ ಬೆಳೆದ ಕಮ್ಮಮ್ ಜಿಲ್ಲೆಯ ಹಳ್ಳಿಯಲ್ಲೇ ಸಿನಿಮಾ ಸೆಟ್ಟೇರುತ್ತಿದೆ. ಅದಕ್ಕೆ ಕಾರಣ ನಮ್ಮ ಶಿವಣ್ಣ. ದೇವರನ್ನ ನಾವಿರುವಲ್ಲಿಗೆ ಕರೆಸೋದು ತಪ್ಪು. ನಾವೇ ದೇವರಿರುವ ಕಡೆ ಹೋಗೋಣ ಎಂದಿರೋ ಶಿವಣ್ಣ, ಆ ದೊಡ್ಡ ಇವೆಂಟ್ ಕ್ಯಾನ್ಸಲ್ ಮಾಡಿಸಿ, ಗುಮ್ಮಡಿ ನರಸಯ್ಯ ಊರಿನ ಶಾಲೆಯೊಂದರ ಗ್ರೌಂಡ್‌ನಲ್ಲಿ ಪೂಜಾ ಕಾರ್ಯಕ್ರಮ ಆಯೋಜನೆ ಮಾಡಲು ಸೂಚಿಸಿದ್ದಾರಂತೆ.
ಸಿಎಂ ರೇವಂತ್ ರೆಡ್ಡಿ, ಹೈದ್ರಾಬಾದ್ ಬಿಟ್ಟು ಹಳ್ಳಿಗೆ ಟೀಂ ಶಿಫ್ಟ್
ಪ್ರಭಾಸ್ ಕುಟುಂಬದ ಕುಡಿಯಿಂದ ಶಿವಣ್ಣಗೆ ಆ್ಯಕ್ಷನ್ ಕಟ್..!
ಚಿರು ಗೊಡವಲು, ಲಾವಣ್ಯ ವಿತ್ ಲವ್ ಬಾಯ್ಸ್ ಸಿನಿಮಾಗಳು ಸೇರಿದಂತೆ ಸುಮಾರು 11 ತೆಲುಗು ಸಿನಿಮಾಗಳಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದ ಪರಮೇಶ್ವರ್ ಹಿವ್ರಲೆ ಈ ಗುಮ್ಮಡಿ ನರಸಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕೂಡ ಹೌದು. ಇಂಟರೆಸ್ಟಿಂಗ್ ವಿಷಯ ಅಂದ್ರೆ ಇನ್ನೂ ಚಿಗುರು ಮೀಸೆ ಯುವಕನಂತೆ ಕಾಣುವ ಯಂಗ್‌ಸ್ಟರ್ ಪರಮೇಶ್ವರ್, ಬಾಹುಬಲಿ ಪ್ರಭಾಸ್ ಕುಟುಂಬದ ಕುಡಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಇನ್‌ಫ್ಯಾಕ್ಟ್ ಚಿತ್ರದ ಫಸ್ಟ್‌ಲುಕ್ ಲಾಂಚ್ ಮಾಡಿಕೊಟ್ಟಿರೋದೇ ಕೃಷ್ಣಂರಾಜು ಪತ್ನಿ, ಪರಮೇಶ್ವರ್ ಅವ್ರ ದೊಡ್ಡಮ್ಮ. ಇನ್ನು ಈ ಸಿನಿಮಾ ಮಾಡಲು ಬರೋಬ್ಬರಿ ಐದು ವರ್ಷಗಳಿಂದ ಮನೆ, ಮಠ ಬಿಟ್ಟು ಗುಮ್ಮಡಿ ನರಸಯ್ಯ ಜೊತೆ ಟ್ರಾವೆಲ್ ಆಗ್ತಿದ್ದಾರೆ ಡೈರೆಕ್ಟರ್ ಪರಮೇಶ್ವರ್.
ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು, ಕನ್ನಡಕ ಹಾಕಿಕೊಂಡ ವಿಧಾನಸೌಧದ ಮುಂದೆ ಶಿವಣ್ಣ ಕಾಣಿಸಿಕೊಂಡಿರೋ ಫಸ್ಟ್‌ಲುಕ್ ಕಿಕ್ ಕೊಡ್ತಿದೆ. ಈ ಚಿತ್ರಕ್ಕೆ ಎನ್ ಸುರೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದು, 2026ರ ಜನವರಿಯಿಂದ ಶೂಟಿಂಗ್ ಶುರು ಆಗ್ತಿದೆ. ಐದು ಬಾರಿ ಶಾಸಕರಾಗಿದ್ದರೂ ಸಹ ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡ್ತಿರೋ ಗುಮ್ಮಡಿ ನರಸಯ್ಯನ ಸಾಧನೆ ನಿಜಕ್ಕೂ ಬೆಳ್ಳಿತೆರೆ ಬೆಳಗುತ್ತಿರೋದು ಖುಷಿಯ ವಿಚಾರ.
