ಬೆಂಗಳೂರು, ಮಾ.5: ಸಿನಿಮಾ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅಸಭ್ಯ ಕೋನಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ವಿಚಾರವಾಗಿ ಕನ್ನಡ ಚಿತ್ರರಂಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟಿ ಸಪ್ತಮಿ ಗೌಡ ಈ ಬಗ್ಗೆ ಪ್ರಶ್ನೆ ಮಾಡಿದ್ದು, ರಮ್ಯಾ ಸೇರಿದಂತೆ ಹಲವು ನಟಿಯರು ಬೆಂಬಲ ವ್ಯಕ್ತಪಡಿಸಿದ್ದರು. ಈಗ ಹಿರಿಯ ನಟ ಶಿವರಾಜ್‌ಕುಮಾರ್ ಕೂಡ ಈ ಅಮಾನವೀಯ ಕೃತ್ಯದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಈವೆಂಟ್‌ಗಳು, ಪ್ರೆಸ್ ಮೀಟ್‌ಗಳು ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ವಿಡಿಯೋಗಳು ಮತ್ತು ಫೋಟೋಗಳನ್ನು ಕೆಲವರು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಘಟನೆಗಳು ಹೆಚ್ಚಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವು ಪಾಪರಾಜಿಗಳು ಹಾಗೂ ಸಾಮಾಜಿಕ ಜಾಲತಾಣದ ಪೇಜ್‌ಗಳು ಈ ರೀತಿಯ ವಿಡಿಯೋಗಳನ್ನು ಹಂಚಿಕೊಂಡು ಹೆಚ್ಚು ವೀಕ್ಷಣೆ ಪಡೆಯಲು ಯತ್ನಿಸುತ್ತಿರುವುದನ್ನು ನಟಿಯರು ತೀವ್ರವಾಗಿ ವಿರೋಧಿಸಿದ್ದಾರೆ.
ಈ ಬಗ್ಗೆ ಮೊದಲಿಗೆ ನಟಿ ಸಪ್ತಮಿ ಗೌಡ ಪ್ರಶ್ನೆ ಎತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಗೌರವದಿಂದ ಚಿತ್ರೀಕರಿಸುವ ಬದಲು ಅವರ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡುವುದು ಹಾಗೂ ಅಸಭ್ಯ ಕೋನಗಳಿಂದ ಚಿತ್ರಿಸುವುದು ಅವಮಾನಕಾರಿ ಎಂದು ಅವರು ಹೇಳಿದ್ದರು. ಸಪ್ತಮಿ ಅವರ ಈ ಹೇಳಿಕೆಗೆ ನಟಿ ರಮ್ಯಾ ಸೇರಿದಂತೆ ಹಲವು ಕಲಾವಿದರು ಬೆಂಬಲ ಸೂಚಿಸಿದ್ದರು.
ಈ ವಿವಾದ ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಹಲವಾರು ನಟಿಯರು ಒಟ್ಟಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಸಭ್ಯ ಕೋನಗಳಿಂದ ವಿಡಿಯೋ ತೆಗೆದು, ನಮ್ಮ ದೇಹದ ಮೇಲೆ ಮಾತ್ರ ಫೋಕಸ್ ಮಾಡಿ ಪ್ರಸಾರ ಮಾಡುತ್ತಿರುವುದು ತುಂಬಾ ಅವಮಾನಕಾರಿ,” ಎಂದು ನಟಿಯರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದಕ್ಕೆ ಬೆಂಬಲವಾಗಿ ನಟ ಶಿವರಾಜ್‌ಕುಮಾರ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ಈ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮಹಿಳೆಯರನ್ನು ಗೌರವಿಸುವುದು ಸಮಾಜದ ಮೂಲಭೂತ ಕರ್ತವ್ಯ ಎಂದು ಹೇಳಿದ್ದಾರೆ.
#ActorsNotObjects pic.twitter.com/eiQOD7K5TH
— DrShivaRajkumar (@NimmaShivanna) March 5, 2026
“ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕಾದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣುಮಕ್ಕಳ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ತರಬೇಡಿ,” ಎಂದು ಶಿವರಾಜ್‌ಕುಮಾರ್ ಮನವಿ ಮಾಡಿದ್ದಾರೆ.
ಶಿವಣ್ಣ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಹಲವರು ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳಾ ಕಲಾವಿದರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಭಿಮಾನಿಗಳು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
