ಪ್ರಯಾಣಿಕರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಏರಿಕೆ, ಇಂದು ಮಧ್ಯರಾತ್ರಿಯಿಂದಲೇ ಜಾರಿ

BMTC, KSRTC ಟಿಕೆಟ್ ದರ 9 ರೂ. ಹೆಚ್ಚಳ

ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಬಿದ್ದಿದೆ. ನವೆಂಬರ್ 4 ಮತ್ತು 5ರ ನಡುವಿನ ಮಧ್ಯರಾತ್ರಿಯಿಂದಲೇ ಪರಿಷ್ಕೃತ ಟಿಕೆಟ್ ದರಗಳು ಜಾರಿಗೆ ಬರಲಿವೆ. ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಗರಿಷ್ಠ ₹9ರವರೆಗೆ ಹಾಗೂ ವೇಗಧೂತ ಬಸ್‌ಗಳಲ್ಲಿ ಗರಿಷ್ಠ ₹18ರವರೆಗೆ ದರ ಹೆಚ್ಚಳ ಮಾಡಲಾಗಿದೆ.

ದರ ಏರಿಕೆಯಿಂದ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಪ್ರಯಾಣಿಸುವವರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಉದಾಹರಣೆಗೆ, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ವೇಗಧೂತ ಬಸ್‌ನಲ್ಲಿ ಪ್ರಯಾಣಿಸುವವರ ಟಿಕೆಟ್ ದರ ₹295ರಿಂದ ₹363ಕ್ಕೆ ಏರಿಕೆಯಾಗಿದ್ದು, ಒಟ್ಟು ₹68 ಹೆಚ್ಚಳವಾಗಿದೆ.

ಬೆಂಗಳೂರಿನಿಂದ ಹೊರಡುವ ಬಸ್‌ಗಳ ಹೊಸ ದರ ಪಟ್ಟಿ

ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮೊದಲ ಐದು ಹಂತಗಳ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಬೆಂಗಳೂರಿನಿಂದ ಸಮೀಪದ ಪಟ್ಟಣಗಳಿಗೆ ತೆರಳುವ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟಲಿದೆ.

ಇನ್ನು ವೇಗಧೂತ ಬಸ್‌ಗಳ ದರದಲ್ಲಿಯೂ ಗಮನಾರ್ಹ ಏರಿಕೆ ಮಾಡಲಾಗಿದೆ.

ಈ ಪರಿಷ್ಕರಣೆಯಲ್ಲಿ ಟೋಲ್ ಶುಲ್ಕ, ಸೇತುವೆ ಶುಲ್ಕ ಹಾಗೂ ಮುಂಗಡ ಕಾಯ್ದಿರಿಸುವಿಕೆ ಶುಲ್ಕಗಳನ್ನು ಸೇರಿಸಲಾಗಿಲ್ಲ ಎಂದು ತಿಳಿಸಲಾಗಿದೆ.

ಬಿಎಂಟಿಸಿ ಪ್ರಯಾಣಿಕರಿಗೂ ದರ ಏರಿಕೆ ಬಿಸಿ

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಿಎಂಟಿಸಿ ಬಸ್ ಟಿಕೆಟ್ ದರವನ್ನೂ ಪರಿಷ್ಕರಿಸಲಾಗಿದೆ. ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಎರಡು ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹4 ಹೆಚ್ಚಳ ಮಾಡಲಾಗಿದ್ದು, ಎರಡು ಕಿಲೋಮೀಟರ್‌ನಿಂದ ನಾಲ್ಕು ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹6 ಏರಿಕೆ ಮಾಡಲಾಗಿದೆ. ದೂರದ ಪ್ರಯಾಣಕ್ಕೆ ಗರಿಷ್ಠ ₹12ರವರೆಗೆ ದರ ಹೆಚ್ಚಳವಾಗಲಿದೆ ಎಂದು ದರಪಟ್ಟಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಮಾರ್ಗಗಳ ಪರಿಷ್ಕೃತ ದರಗಳು ಹೀಗಿವೆ
ವಜ್ರ ಎಸಿ ಬಸ್ ದರವೂ ಹೆಚ್ಚಳ

ಬಿಎಂಟಿಸಿಯ ಹವಾನಿಯಂತ್ರಿತ ವಜ್ರ ಬಸ್‌ಗಳ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ. ಆರು ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹5, ಆರುರಿಂದ 18 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹10 ಹಾಗೂ ದೂರದ ಪ್ರಯಾಣಕ್ಕೆ ಗರಿಷ್ಠ ₹15ರವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಪ್ರಕಟಿತ ದರಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಮಾರ್ಗಗಳ ಹೊಸ ದರಗಳು
ದರ ಏರಿಕೆಗೆ ಸಚಿವ ಬೈರತಿ ಸುರೇಶ್ ಸಮರ್ಥನೆ

ಬಸ್ ಟಿಕೆಟ್ ದರ ಹೆಚ್ಚಳದ ಕುರಿತು ಮಾತನಾಡಿರುವ ಸಚಿವ ಬೈರತಿ ಸುರೇಶ್, ಸಾರಿಗೆ ನಿಗಮಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿರುವುದರಿಂದ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಸ್‌ಗಳಿದ್ದು, ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಸಮಸ್ಯೆಯಾಗುತ್ತಿಲ್ಲ. ನಿಗಮಗಳು ನಷ್ಟದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ಟಿಕೆಟ್ ದರ ಪರಿಷ್ಕರಣೆ ಮಾಡಬೇಕಿದ್ದರೂ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ದರ ಏರಿಕೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಹಾಗೂ ನಿರ್ವಹಣಾ ವೆಚ್ಚಗಳ ಕಾರಣದಿಂದ ಹಂತ ಹಂತವಾಗಿ ದರ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

2021ರಲ್ಲಿ ಎಂ.ಆರ್. ಶ್ರೀನಿವಾಸ್ ನೇತೃತ್ವದಲ್ಲಿ ರಚನೆಯಾದ ಸಮಿತಿಯು ಕಾಲಕಾಲಕ್ಕೆ ದರ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಸಾರಿಗೆ ನಿಗಮಗಳಿಗೆ ₹1,111 ಕೋಟಿ ಇಂಧನ ಬಾಕಿ ಇದ್ದು, ವಾರ್ಷಿಕವಾಗಿ ಇಂಧನಕ್ಕಾಗಿ ₹5,694 ಕೋಟಿ ವೆಚ್ಚವಾಗುತ್ತಿದೆ ಎಂಬ ಅಂಕಿ-ಅಂಶಗಳನ್ನೂ ಸಚಿವರು ಉಲ್ಲೇಖಿಸಿದ್ದಾರೆ.

ದರ ಏರಿಕೆಗೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ಸಾರಿಗೆ ನಿಗಮಗಳ ಸೇವೆಯನ್ನು ಉಳಿಸಿ ಬೆಳೆಸಲು ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಸಂಸ್ಥೆಗಳು ಮನವಿ ಮಾಡಿವೆ. ಆದರೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಸ್ ಪ್ರಯಾಣದ ಹೆಚ್ಚುವರಿ ವೆಚ್ಚ ಮತ್ತಷ್ಟು ಹೊರೆಯಾಗುವ ಸಾಧ್ಯತೆಯಿದೆ.

Exit mobile version