ಗಿಲ್ಲಿ ವಿರುದ್ಧ ಫಿಲಂ ಚೇಂಬರ್‌ಗೆ ದೂರು ದಾಖಲಿಸಿದ ‘ಸರ್ಕಾರಿ ಶಾಲೆ H8’ ನಿರ್ಮಾಪಕರು!

BeFunky collage 2026 02 06T165449.622

ಕನ್ನಡ ಬಿಗ್ ಬಾಸ್ ಮೂಲಕ ರಾಜ್ಯಾದ್ಯಂತ ಖ್ಯಾತಿ ಪಡೆದ ಹಾಸ್ಯ ನಟ ಗಿಲ್ಲಿ ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಅವರೇ ಪ್ರಮುಖ ಪಾತ್ರ ನಿರ್ವಹಿಸಿರುವ ಬಹುನಿರೀಕ್ಷಿತ ಸಿನಿಮಾ ‘ಸರ್ಕಾರಿ ಶಾಲೆ H8’ದ ನಿರ್ಮಾಪಕರು ಗಿಲ್ಲಿ ವಿರುದ್ಧ ಅಧಿಕೃತವಾಗಿ ಕನ್ನಡ ಫಿಲಂ ಚೇಂಬರ್‌ಗೆ ದೂರು ಸಲ್ಲಿಸಿದ್ದಾರೆ.

ನಿರ್ಮಾಪಕರ ಆರೋಪಗಳು ಏನು?
ಸರ್ಕಾರಿ ಶಾಲೆ H8 ಸಿನಿಮಾದಲ್ಲಿ ಗಿಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಕೇಳಿದಷ್ಟು ಸಂಭಾವನೆ ನೀಡಿ, ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ, ಚಿತ್ರದ ಪ್ರಮೋಷನ್‌ಗೆ ಸಂಬಂಧಿಸಿದಂತೆ ಗಿಲ್ಲಿ ಒಂದೇ ಒಂದು ದಿನವೂ ಭಾಗವಹಿಸಿಲ್ಲ. ಎಷ್ಟೇ ಫೋನ್ ಮಾಡಿದರೂ ಕರೆಯನ್ನು ತೆಗೆದುಕೊಳ್ಳಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಕನಿಷ್ಠ ಒಂದು ಪೋಸ್ಟ್ ಕೂಡ ಮಾಡಲಿಲ್ಲ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಚಿತ್ರದ ಪ್ರಚಾರಕ್ಕೆ ತೊಂದರೆಯಾಗಿದೆ ಎಂಬುದು ನಿರ್ಮಾಪಕರ ಅಳಲು.

ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ‘ಸರ್ಕಾರಿ ಶಾಲೆ H8’ ಇದೇ ಫೆಬ್ರವರಿ 6ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಗಿರಿಚಂದ್ರ ಪ್ರೊಡಕ್ಷನ್ಸ್‌ನ ಮೂಲಕ ತೇಜಸ್ವಿನಿ ಎಸ್ ನಿರ್ಮಾಣ ಮಾಡಿದ್ದಾರೆ. ಗಿಲ್ಲಿ ನಟನ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ ಸೇರಿದಂತೆ ಇತರ ಕಲಾವಿದರು ನಟಿಸಿದ್ದಾರೆ. ಬಿಗ್ ಬಾಸ್ ನಂತರ ಗಿಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಈ ವಿವಾದದಿಂದ ಚಿತ್ರದ ಬಿಡುಗಡೆಗೆ ಯಾವುದೇ ಪರಿಣಾಮ ಬೀಳುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ. ಆದರೆ ಫ್ಯಾನ್ಸ್ ಮತ್ತು ಸಿನಿ ಪ್ರೇಮಿಗಳ ನಡುವೆ ಈ ವಿಷಯ ಚರ್ಚೆಯಾಗುತ್ತಿದೆ. ಗಿಲ್ಲಿ ನಟರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Exit mobile version