14 ವರ್ಷಗಳ ನಂತ್ರ ಚಂದನವನದಲ್ಲಿ ಲಕ್ಕಿ ಸೌಂಡ್

ಅಂದು ರಾಕಿಂಗ್ ಸ್ಟಾರ್ ಲಕ್ಕಿ.. ಇಂದು ಮಿಸ್ಟರ್ ಲಕ್ಕಿ

Untitled design 2026 10 19T174854.739

ಒಂದೂವರೆ ದಶಕದ ನಂತ್ರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೆ ಲಕ್ಕಿ ಸಿನಿಮಾ ಸದ್ದು ಮಾಡ್ತಿದೆ. ಯೆಸ್.. ರಾಕಿಂಗ್ ಸ್ಟಾರ್ ಯಶ್ ಹಾಗೂ ಮೋಹಕತಾರೆ ರಮ್ಯಾ ಜೋಡಿ ಮೋಡಿ ಮಾಡಿದ್ದ ಲಕ್ಕಿ ಸಿನಿಮಾದ ಟೈಟಲ್‌‌ನಲ್ಲಿ ಮತ್ತೊಂದು ಹೊಸ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಯಾರು ಈ ಮಿಸ್ಟರ್ ಲಕ್ಕಿ..? ಟೀಸರ್ ಹೇಗಿದೆ..? ಏನಿದರ ಅಸಲಿ ಕಥೆ ಅಂತೀರಾ..? ಇಲ್ಲಿದೆ ನೋಡಿ…

ವರ್ಷಕ್ಕೆ ಕನಿಷ್ಟ 250 ಸಿನಿಮಾಗಳು ತೆರೆಗೆ ಬರ್ತಿವೆ. ಆ ಪೈಕಿ ಹೊಸ ಸಿನಿಮೋತ್ಸಾಹಿ ತಂಡಗಳಿಗೆ ಕೊಂಚ ಹಸಿವು ಜಾಸ್ತಿ. ತಮ್ಮ ಕನಸು ನನಸು ಮಾಡೋಕೆ ಅವರು ಜಾಸ್ತಿನೇ ಎಫರ್ಟ್ ಹಾಕ್ತಾರೆ. ಬಜೆಟ್ ಚಿಕ್ಕದಾದ್ರೂ ಕೆಲಸ ದೊಡ್ಡದಾಗಿಯೇ ಮಾಡಿರ್ತಾರೆ. ಸದ್ಯ ಅಂಥದ್ದೊಂದು ಭರವಸೆ ಹುಟ್ಟಿಸ್ತಿರೋದು ಮಿಸ್ಟರ್ ಲಕ್ಕಿ ಅನ್ನೋ ಸಿನಿಮಾ ತಂಡ. ಯೆಸ್.. ಇತ್ತೀಚೆಗೆ ಮಿಸ್ಟರ್ ಲಕ್ಕಿ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಹಾಗೂ ಇಂಟರೆಸ್ಟಿಂಗ್ ಆಗಿದೆ ಕಂಟೆಂಟ್.

ಸಾಮಾನ್ಯವಾಗಿ ಲಕ್ಕಿ ಅಂದಾಕ್ಷಣ ನಮ್ಮ ರಾಕಿಂಗ್‌ ಸ್ಟಾರ್ ಯಶ್ ಹಾಗೂ ಮೋಹಕತಾರೆ ರಮ್ಯಾ ಜೋಡಿಯ ಲಕ್ಕಿ ಚಿತ್ರ ನೆನಪಾಗುತ್ತೆ. ಆದ್ರೆ 14 ವರ್ಷಗಳ ಹಿಂದೆ ಬಂದ ಆ ಲಕ್ಕಿ ಸಿನಿಮಾಗೂ ಇದಕ್ಕೂ ಸಂಬಂಧವಿಲ್ಲ. ಇದೊಂದು ಸೈಂಟಿಫಿಕ್ ಫ್ಯಾಂಟಸಿ ಥ್ರಿಲ್ಲರ್ ಕಥಾನಕ ಹೊಂದಿದ್ದು, ರಿಲೀಸ್‌ಗೆ ಸಜ್ಜಾಗಿದೆ. ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಸಾರಥ್ಯದಲ್ಲಿ ತಯಾರಾಗಿರೋ ಈ ಚಿತ್ರದಲ್ಲಿ ಟೋಪಿ ಕೂಡ ಒಂದು ಪಾತ್ರವಾಗಿದೆ. ಇದರ ಮೇಲೆಯೇ ಸಾಂಗ್ ಕೂಡ ಮಾಡಲಾಗಿದ್ದು, ಆ ಹಾಡು ಹಾಗೂ ಚಿತ್ರದ ಟೀಸರ್ ಎಲ್ಲರ ಗಮನ ಸೆಳೆದಿವೆ. ಹೆಚ್ ಆರ್ ವಿಷನ್ಸ್ ಮೂಲಕ ಚಂದನ್ ರಂಗಸ್ವಾಮಿ, ವಸಂತ್, ನಾರಾಯಣ ಸ್ವಾಮಿ, ಅನ್ನಪೂರ್ಣ, ಪವನ್ ಶೆಟ್ಟಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್ ತೇಜ್, ರಿತಿ ಶೆಟ್ಟಿ ಇಲ್ಲಿ ನಾಯಕ, ನಾಯಕಿಯಾಗಿದ್ದು, ಸಹೋದರಿ ಪಾತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ.

ಐಟಿನಲ್ಲಿ ವರ್ಕ್ ಮಾಡ್ತಿದ್ದ ನಿರ್ದೇಶಕ ಹರ್ಷಿತ್ ಈ ಸಿನಿಮಾ ಮಾಡೋಕೆ ಬ್ರೇಕ್ ತಗೊಂಡು ಸ್ನೇಹಿತರೇ ಜೊತೆಗೂಡಿ ಮಿಸ್ಟರ್ ಲಕ್ಕಿ ಅನ್ನೋ ಪ್ರಾಜೆಕ್ಟ್ ಮುಗಿಸಿದ್ದಾರೆ‌. ಇದಕ್ಕೂ ಮೊದಲು ಇವರು ಗುಣ ಅನ್ನೋ ಶಾರ್ಟ್ ಫಿಲ್ಮ್ ಮಾಡಿದ್ರು. ಲಕ್ಕಿ ಅನ್ನೋದು ನಾಯಕನಟ ಲಕ್ಷ್ಮಣನ ನಿಕ್ ನೇಮ್ ಆಗಿದ್ದು, ಹೆಸರು ಲಕ್ಕಿ ಅದರೂ ಆತನ ಲೈಫ್‌ಲಿ ಲಕ್ಕೇ ಇರಲ್ಲ. ಒಮ್ಮೆ ಮ್ಯಾಜಿಕಲ್ ಕ್ಯಾಪ್ ಸಿಗುತ್ತೆ. ಅದು ಸಿಕ್ಕ ನಂತರ ಆತನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಅನ್ನೋದನ್ನ ಥ್ರಿಲ್ಲಿಂಗ್ ಆಗಿ ಚಿತ್ರದಲ್ಲಿ ಹೇಳಿದ್ದಾರಂತೆ.

ಡಿ ಬಾಸ್ ಅಭಿಮಾನಿಗಳಿಗಾಗಿ ಒಂದು ಕಾಮಿಡಿ ಸೀನ್ ಕೂಡ ಇರಲಿದೆಯಂತೆ. ನಾಯಕ ರಾಮ್ ತೇಜ್ ಮಾತನಾಡಿ ನಾನು ರಂಗಸಾರೋಟು ತಂಡದಲ್ಲಿದ್ದೆ. ಕೆಲ ಸೀರಿಯಲ್‌‌ಗಳಲ್ಲಿ ನಟಿಸಿದ್ದೇನೆ. ನಂತರ ಹರ್ಷಿತ್ ಸಿಕ್ಕರು. ಮುಂಚೆ ಚಿತ್ರಕ್ಕೆ ‘ಕ್ಯಾಪ್ ಆಫ್ ಲಕ್’ ಟೈಟಲ್ ಇತ್ತು. ಐಶ್ವರ್ಯಾ, ರಿತಿ ಹಾಗೂ ನನ್ನ ಮೇಲೆ ಬಹುತೇಕ ಕಥೆ ಸಾಗುತ್ತದೆ‌. ‘ಟೋಪಿ’ ಈ ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರವಾಗಿದೆ. ಶ್ರೀನಿಧಿ ಬೆಂಗಳೂರು ವಿಶೇಷ ಪಾತ್ರ ಮಾಡಿದ್ದಾರೆ ಎಂದರು.

ಪ್ರಸನ್ನ ಕುಮಾರ್ ಎಂ.ಎಸ್. ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆಯಂತೆ. ತ್ರಿಲೋಕ್ ತ್ರಿವಿಕ್ರಮ, ಶ್ರೀನಿಧಿ, ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ. ಹರಿ ಸಮಷ್ಠಿ ನಾಯಕನ ತಂದೆಯಾಗಿ, ರಾಯ ಸ್ನೇಹಿತನಾಗಿ ನಟಿಸಿದ್ದಾರೆ. ಸಾಗರ್ ಎನ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಅಂದಹಾಗೆ ಇತ್ತೀಚೆಗೆ ಚಿತ್ರತಂಡ ಜಯನಗರ ಹಾಗೂ ಬೆಂಗಳೂರಿನ ಕೆಲ ಭಾಗಗಳಲ್ಲಿ ಜನರ ಬಳಿಗೇ ತೆರಳಿ ವಿಭಿನ್ನವಾಗಿ ಸಿನಿಮಾದ ಪ್ರಮೋಷನ್ಸ್ ಕೂಡ ಮಾಡಿದ್ರು. ಒಟ್ಟಾರೆ ಈ ತಿಂಗಳಾಂತ್ಯಕ್ಕೆ ಸಿನಿಮಾನ ತೆರೆಗೆ ತರೋ ಧಾವಂತದಲ್ಲಿದೆ ಟೀಂ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version