ಗಣಪ, ಕರಿಯ-2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ಇನ್ನು ನೆನಪು ಮಾತ್ರ. ಇನ್ನೂ ಬದುಕಿ ಬಾಳಬೇಕಿದ್ದ ಜೀವ, ಸಣ್ಣ ವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು, ಬಾರದೂರಿಗೆ ಪಯಣ ಬೆಳೆಸಿದೆ. 34 ವರ್ಷದ ಸಂತೋಷ್ ಬಾಲರಾಜ್‌ಗೆ ಏನಾಗಿತ್ತು..? ಜವರಾಯ ಆತನ ಬಾಳಲ್ಲಿ ಆಟ ಆಡಿದ್ಹೇಗೆ ಅನ್ನೋದಕ್ಕೆ ಉತ್ತರ ಇಲ್ಲಿದೆ.
- ಅಯ್ಯೋ ದುರ್ವಿಧಿಯೇ.. ಜಾಂಡೀಸ್‌ಗೆ ನಟ ಸಂತೋಷ್ ಬಲಿ
- ಕೆಂಪ ಟು ಬರ್ಕ್ಲಿ, ಸತ್ಯ.. ಗಣಪ, ಕರಿಯಾ-2 ಖ್ಯಾತಿಯ ಕಲಾವಿದ
- ಜೀವ ತೆಗೆದ ಜಾಂಡೀಸ್.. 34ನೇ ವಯಸ್ಸಿಗೆ ಪ್ರಾಣ ತೆತ್ತ ನಟ
- ದರ್ಶನ್ ಕರಿಯರ್‌ಗೆ ಕರಿಯ ನೀಡಿದ್ದ ಪ್ರೊಡ್ಯೂಸರ್‌ನ ಮಗ
ಕೆಂಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪ್ರತಿಭಾನ್ವಿತ ಕಲಾವಿದ ಸಂತೋಷ್ ಬಾಲರಾಜ್. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕರಿಯ ಅಂತಹ ಮೈಲಿಗಲ್ಲು ಸಿನಿಮಾ ನೀಡಿದ ಪ್ರೊಡ್ಯೂಸರ್ ಆನೇಕಲ್ ಬಾಲರಾಜ್‌ರ ಒಬ್ಬನೇ ಮಗ. ಸ್ಯಾಂಡಲ್‌ವುಡ್ ಸ್ಟಾರ್‌ಗಳಿಗೆ ಒಳ್ಳೊಳ್ಳೆ ಸಿನಿಮಾಗಳನ್ನ ನಿರ್ಮಿಸಿದಂತೆ ತನ್ನ ಮಗನಿಗೂ ಸಿನಿಮಾ ಮಾಡಿ, ದೊಡ್ಡ ಸ್ಟಾರ್ ಮಾಡುವ ಕನಸು ಕಂಡಿದ್ರು ತಂದೆ ಆನೇಕಲ್ ಬಾಲರಾಜ್. ಆದ್ರೆ ಚಿಗುರುವ ಮೊದಲೇ ಅದನ್ನ ಚಿವುಟಿ ಬಿಟ್ಟಿದೆ ವಿಧಿ.
ಹೌದು.. 34 ವರ್ಷದ ಸಂತೋಷ್ ಬಾಲರಾಜ್ ಇಂದು ಬೆಳಗ್ಗೆ 10 ಗಂಟೆಗೆ ಕಾಲನ ಕರೆಗೆ ಓಗೊಟ್ಟು, ಇಹಲೋಕದತ್ತ ಪಯಣ ಬೆಳೆಸಿದ್ದಾರೆ. ಜಾಂಡೀಸ್‌ನಿಂದ ಬಳಲುತ್ತಿದ್ದ ಸಂತೋಷ್, ಕುಮಾರಸ್ವಾಮಿ ಲೇಔಟ್‌ನಲ್ಲಿರೋ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ, ಜಾಂಡೀಸ್ ಮೈಯೆಲ್ಲಾ ಹರಡಿದ್ದರ ಪರಿಣಾಮ, ಮಲ್ಟಿ ಆರ್ಗನ್ ಫೇಲ್ಯೂರ್ ಆಗಿ ಜೀವ ಬಿಟ್ಟಿದ್ದಾರೆ.
ಗಣಪ, ಕರಿಯಾ-2, ಬರ್ಕ್ಲಿ, ಸತ್ಯ ಸಿನಿಮಾಗಳು ಸೇರಿದಂತೆ ಭರವಸೆಯ ಚಿತ್ರಗಳ ನಾಯಕನಟನಾಗಿದ್ದ ಸಂತೋಷ್‌ರನ್ನ ಮೊದಲು ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್. ಕೆಂಪ, ಜನ್ಮ ಚಿತ್ರಗಳ ಮೂಲಕ ಅಂಬೆಗಾಲು ಇಡ್ತಾ ಸ್ಯಾಂಡಲ್‌ವುಡ್‌ಗೆ ಬಂದಂತಹ ಸಂತೋಷ್, ಗಣಪ, ಕರಿಯ-2 ವೇಳೆಗೆ ಭರವಸೆಯ ಸ್ಟಾರ್ ನಟ ಅನಿಸಿಕೊಂಡರು.
ಆದ್ರೆ ಸಾಕಷ್ಟು ಬಾಳಿ, ಬದುಕಬೇಕಿದ್ದ ಈತನ ಬಾಳಲ್ಲಿ ವಿಧಿ ಆಟ ಆಡಿಬಿಟ್ಟಿದೆ. 2022ರ ಮೇನಲ್ಲಿ ತಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ರು. ಅದ್ರಿಂದ ಹೊರಬರಲಾಗದೆ ಕೊರಗುತ್ತಿದ್ದ ಸಂತೋಷ್‌ಗೆ ಮಾರಣಾಂತಿಕ ಜಾಂಡೀಸ್ ಆವರಿಸಿಕೊಂಡಿತ್ತು. ಈ ಹಿಂದೆ ಒಮ್ಮೆ ಅದಕ್ಕಾಗಿ ಚಿಕಿತ್ಸೆ ಕೂಡ ಪಡೆದಿದ್ದರಂತೆ. ಮದ್ವೆ ಆಗೋಕೆ ಅಂತ ಹುಡ್ಗಿಯನ್ನ ನೋಡಿ, ಹೊಸ ಲೈಫ್ ಲೀಡ್ ಮಾಡೋಕೆ ಸಜ್ಜಾಗ್ತಿದ್ದ ಸಂತೋಷ್ ಜೀವವನ್ನು ಜವರಾಯ ಹದ್ದಿನಂತೆ ಬಂದು ಹೊತ್ತುಕೊಂಡು ಹೋಗಿದ್ದಾನೆ.
ಗಂಡನನ್ನ ಕಳೆದುಕೊಂಡಿದ್ದ ಆನೇಕಲ್ ಬಾಲರಾಜ್ ಪತ್ನಿ ಈಗ ಮಗನನ್ನ ಸಹ ಕಳೆದುಕೊಂಡಿದ್ದಾರೆ. ಸಂತೋಷ್‌ಗೆ ಒಬ್ಬ ತಂಗಿ ಕೂಡ ಇದ್ದು, ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಆನೇಕಲ್‌ನಲ್ಲಿರೋ ಬಾಲರಾಜ್‌ರ ಸ್ಮಾರಕದ ಪಕ್ಕದಲ್ಲೇ ಸಂತೋಷ್ ಅಂತ್ಯಕ್ರಿಯೆ ಆಗಸ್ಟ್ 6ರ ಬೆಳಗ್ಗೆ ನಡೆಯಲಿದ್ದು, ಅಲ್ಲಿಯವರೆಗೂ ಜೆಪಿ ನಗರದ ಮನೆಯಲ್ಲಿ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಲೂಸ್‌ಮಾದ ಯೋಗಿ, ಪ್ರದೀಪ್ ದೊಡ್ಡಯ್ಯ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಸಂತೋಷ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸಣ್ಣ ವಯಸ್ಸಿನಲ್ಲೇ ಜೀವ ಬಿಟ್ಟಂತಹ ಗೆಳೆಯನ ಬಗ್ಗೆ ಆತ್ಮೀಯರು ಕೂಡ ಶಾಕ್‌ನಲ್ಲಿದ್ದಾರೆ. ಒಟ್ಟಾರೆ ಬಾಲರಾಜ್ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ. ಸಂತೋಷ್ ಆತ್ಮಕ್ಕೆ ಶಾಂತಿ ಸಿಗಲಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್