ಸ್ಯಾಂಡಲ್‌ವುಡ್‌ನ ಹಾಸ್ಯನಟ ಚಿಕ್ಕಣ್ಣನಿಗೆ ಅದೆಷ್ಟು ಸಲ ಮದ್ವೆ ಆಗೋಗಿದೆಯೋ ಏನೋ. ಹೌದು.. ಸುಮಾರು ಮಂದಿ ಜೊತೆ ಚಿಕ್ಕಣ್ಣನ ಮದ್ವೆ ತಳುಕು ಹಾಕಿಕೊಂಡಿತ್ತು. ಆದ್ರೀಗ ಚಿಕ್ಕು ಅಫಿಶಿಯಲಿ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಇಷ್ಟಕ್ಕೂ ಹುಡ್ಗಿ ಯಾರು..? ಆಕೆಯ ಫೋಟೋಸ್ ವೈರಲ್ ಆಗಿದ್ಹೇಗೆ ಅನ್ನೋದ್ರ ಕಲರ್‌ಫುಲ್ ಕಹಾನಿ ಇಲ್ಲಿದೆ, ನೋಡಿ.
- ಚಿಕ್ಕಣ್ಣಗೆ ಮದ್ವೆ ಫಿಕ್ಸ್.. ಯಾರು ಈ ಮಂಡ್ಯ ಚೆಲುವೆ ಗೊತ್ತಾ..?
- ‘ಸ್ಯಾಂಡಲ್‌ವುಡ್ ಉಪಾಧ್ಯಕ್ಷ’ನ ಜೊತೆ ಪಾವನಾ ಸಪ್ತಪದಿ..!
- ಪಾವನವಾಗಲಿದೆ ಚಿಕ್ಕು ಲೈಫ್.. ಇಷ್ಟಕ್ಕೂ ಹುಡ್ಗಿ ಹಿನ್ನೆಲೆ ಏನು..?
- ಸಿನಿಮಾಗೆ ಐತಿಹಾಸಿಕ ನಂಟಿರೋ ಊರು.. ಲಾಕ್ ಆಗಿದ್ಹೇಗೆ..?
ಮೊನ್ನೆಯಷ್ಟೇ ಸಪ್ತಪದಿ ತುಳಿದ ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ ಸೇರಿದಂತೆ ಸಾಕಷ್ಟು ಮಂದಿ ಜೊತೆ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣನ ಮದುವೆ ತಳುಕು ಹಾಕಿಕೊಂಡಿತ್ತು. ಆದ್ರೆ ಅದೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದಂತಹ ಅಂತೆ ಕಂತೆಗಳು. ಆದ್ರೀಗ ಸ್ವತಃ ಚಿಕ್ಕಣ್ಣನೇ ಅಧಿಕೃತವಾಗಿ ಮದ್ವೆ ಆಗ್ತಿರೋ ಹುಡ್ಗಿಯ ಕೈ ಹಿಡಿದಿರೋ ಫೋಟೋಗಳ ಮೂಲಕ ಕನ್ನಡಿಗರ ಮುಂದೆ ಲಾಕ್ ಆಗಿದ್ದಾರೆ.
ಯೆಸ್.. ಈಕೆಯ ಹೆಸರು ಪಾವನಾ ಕೆ.ಸಿ. ಗೌಡ. ಸಕ್ಕರೆ ನಾಡು ಮಂಡ್ಯ ಗೌಡ್ರ ಮನೆಯ ಹುಡ್ಗಿ. ಇದೇ ಹುಡ್ಗಿ ನೋಡಿ ನಮ್ಮ ಚಿಕ್ಕಣ್ಣ ಕೈ ಹಿಡಿಯುತ್ತಿರೋ ಅದೃಷ್ಠವಂತೆ. ಅಂದಹಾಗೆ ಮಂಡ್ಯದ ಶ್ರೀರಂಗಪಟ್ಟಣದ ಬಳಿ ಇರೋ ಮಹದೇವಪುರದ ಚೆಂದುಳ್ಳಿ ಚೆಲುವೆ ಈಕೆ. ನಿನ್ನೆ ಮೈಸೂರಿನಲ್ಲಿ ನಡೆದ ಆಕೆಯ ಅಣ್ಣನ ಮಗನ ಬರ್ತ್ ಡೇಗೆ ಚಿಕ್ಕಣ್ಣ ಹೋಗಿದ್ದರು. ಆಗ ಯಾರೋ ಕ್ಲಿಕ್ಕಿಸಿದ ಫೋಟೋಗಳು ಎಲ್ಲೆಡೆ ವೈರಲ್ ಆಗಿಬಿಟ್ಟಿವೆ. ಆ ಮೂಲಕ ಇಚ್ಟು ದಿನ ಗುಟ್ಟಾಗಿ ಇಟ್ಟಿದ್ದ ಚಿಕ್ಕಣ್ಣನ ಮದ್ವೆ ಮ್ಯಾಟರ್ ಇದೀಗ ರಟ್ಟಾಗಿದೆ.
ಅಂದಹಾಗೆ ಮಹದೇವಪುರ ಊರಿಗಿರೋ ಇತಿಹಾಸದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಿತ್ರರಂಗಕ್ಕೂ ಈ ಊರಿಗೂ ಅವಿನಾಭಾವ ಸಂಬಂಧ. ಯಾಕಂದ್ರೆ ಇದನ್ನ ಶೂಟಿಂಗ್ ಮಹದೇವಪುರ ಅಂತಲೇ ಎಲ್ಲರೂ ಕರೀತಾರೆ. ರಜನೀಕಾಂತ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಆ ಊರಲ್ಲಿ ಚಿತ್ರೀಕರಣಗೊಂಡಿವೆ. ಮುತ್ತು, ಸಾಹುಕಾರ, ದಳಪತಿ, ರಾಮಕೃಷ್ಣ, ಸೂರಪ್ಪ ಸೇರಿದಂತೆ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಮೂವೀಸ್ ಇಲ್ಲಿ ಚಿತ್ರೀಕರಣಗೊಂಡಿವೆ. ಹಾಗಂತ ಚಿತ್ರರಂಗಕ್ಕೂ ಚಿಕ್ಕಣ್ಣ ಕೈ ಹಿಡಿಯುತ್ತಿರೋ ಪಾವನಾ ಗೌಡಗೂ ಲಿಂಕ್ ಇಲ್ಲ.
ಚಿತ್ರರಂಗಕ್ಕೆ ಐತಿಹಾಸಿಕ ನಂಟಿರೋ ಊರಿಗೆ ಅಳಿಯನಾಗಲು ಹೊರಟಿರೋ ಚಿಕ್ಕಣ್ಣನ ಹುಡ್ಗಿ, ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ. ಟಿಪಿಕಲ್ ಹಳ್ಳಿ ಹುಡ್ಗಿ ಆಗಿರೋ ಪಾವನಾ, ಸದ್ಯ ಮೈಸೂರಿನಲ್ಲಿ ಸೆಟಲ್ ಆಗಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರೋ ಚಿಕ್ಕಣ್ಣನ ಭಾವಿ ಪತ್ನಿ ಪಾವನಾ, ಡಿ ಕಂಪೋಸ್ ಆಗುವ ಪ್ಲಾಸ್ಟಿಕ್ ಕವರ್ ಕಂಪೆನಿಯ ಡಿಸ್ಟ್ರಿಬ್ಯೂಟರ್ ಕೂಡ ಹೌದು. ಸ್ಮಾಲ್ ಬ್ಯುಸಿನೆಸ್ ವುಮನ್ ಆಗಿ ಒಂದಷ್ಟು ಮಂದಿಗೆ ಕೆಲಸ ನೀಡಿರೋ ಪಾವನಾಗೆ ಇದು ಪ್ಯೂರ್ ಅರೇಂಜ್ ಮಾರೇಜ್ ಎನ್ನಲಾಗ್ತಿದೆ.
ನೂರಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿರೋ ಚಿಕ್ಕಣ್ಣ, ಕಳೆದ ವರ್ಷ ಉಪಾಧ್ಯಕ್ಷ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ರು. ಗಾರೆಯಿಂದ ತಾರೆ ಅನ್ನೋ ಟೈಟಲ್ ಕೂಡ ಪಡೆದ ಚಿಕ್ಕಣ್ಣ, ಆರಂಭದ ದಿನಗಳಲ್ಲಿ ಜೀವನಕ್ಕಾಗಿ ಗಾರೆ ಕೆಲಸ ಮಾಡ್ತಿದ್ರು, ನಂತ್ರ ಟಿವಿ ಚಾನೆಲ್‌ನಲ್ಲಿ ನಿರೂಪಣೆ ಮಾಡೋಕೆ ಮುಂದಾಗಿದ್ರು. ಆದ್ರೀಗ ಚಿಕ್ಕಣ್ಣ ಕೋಟ್ಯಾಧಿಪತಿ. ಎಲ್ಲಾ ಸ್ಟಾರ್ ಹೀರೋಗಳ ಫೇವರಿಟ್ ಕಮೆಡಿಯನ್. ಸದ್ಯ ಲಕ್ಷ್ಮೀಪುತ್ರ ಅನ್ನೋ ಮತ್ತೊಂದು ಸಿನಿಮಾದ ನಾಯಕನಟ ಕೂಡ ಹೌದು.
ಮದುವೆ ವಿಷಯವನ್ನು ಒಂದೊಳ್ಳೆ ಸಂದರ್ಭ ನೋಡಿ, ಅಫಿಶಿಯಲಿ ತಾನೇ ಅನೌನ್ಸ್ ಮಾಡೋಣ ಅಂತಿದ್ರು ಚಿಕ್ಕಣ್ಣ. ಆದ್ರೀಗ ಹೇಗೋ ಫೋಟೋಸ್ ಮೂಲಕ ಎಲ್ಲವೂ ಬಯಲಾಗಿಬಿಟ್ಟಿದೆ. ಹಾಗಾಗಿ ಲಕ್ಷ್ಮೀಪುತ್ರ ಸಿನಿಮಾ ಮುಗೀತಾ ಇದ್ದಂತೆ ಹಸೆಮಣೆ ಏರೋಕೆ ಯೋಜನೆ ರೂಪಿಸಿದ್ದಾರೆ. ಇನ್ನು ಚಿಕ್ಕಣ್ಣ ಈ ಬಗ್ಗೆ ಎಲ್ಲಾದ್ರೂ ಸ್ಪಷ್ಟನೆ ನೀಡುವವರೆಗೆ ಮದ್ವೆ ಮ್ಯಾಟರ್‌ಗೆ ಬೀಳಲ್ಲ ಫುಲ್‌ಸ್ಟಾಪ್. ಸೋ.. ಸಂಸಾರಸ್ಥನಾಗ್ತಿರೋ ಚಿಕ್ಕಣ್ಣನಿಗೆ ಅಡ್ವಾನ್ಸ್ ಆಗಿ ಆಲ್ ದಿ ಬೆಸ್ಟ್ ಹೇಳೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್