ಸೆಪ್ಟೆಂಬರ್: ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ S/O ಮುತ್ತಣ್ಣ ಚಿತ್ರವು ಇದೇ ಸೆಪ್ಟೆಂಬರ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಂ ದೇವರಾಜ್ ನಾಯಕನಾಗಿ ಮತ್ತು ದಿಯಾ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಅಪ್ಪ-ಮಗನ ಬಾಂಧವ್ಯದ ಭಾವನಾತ್ಮಕ ಕಥಾನಕವನ್ನು ಒಳಗೊಂಡಿದೆ.
ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿರುವಾಗ, ಚಿತ್ರತಂಡವು ಜಯಂತ ಕಾಯ್ಕಿಣಿ ಬರೆದಿರುವ “ಕರೆದರೆ ಹಾಗೆಲ್ಲಾ ಬರಲಾರೆ ನಾನು” ಎಂಬ ಸುಮಧುರ ಹಾಡನ್ನು ಬಿಡುಗಡೆ ಮಾಡಿದೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ದೀಪ್ತಿ ಸುರೇಶ್ ಜೊತೆಗೆ ಅವರೇ ಹಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಹಾಡನ್ನು ಅನಾವರಣಗೊಳಿಸಿದ ಚಿತ್ರತಂಡ, ಚಿತ್ರದ ಕುರಿತು ತಮ್ಮ ಉತ್ಸಾಹವನ್ನು ಹಂಚಿಕೊಂಡಿದೆ.
ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡುತ್ತಾ, “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಆರಂಭದಿಂದಲೂ ನೀವೆಲ್ಲರೂ ನೀಡಿರುವ ಪ್ರೋತ್ಸಾಹ ಮತ್ತು ಚಿತ್ರತಂಡದ ಸಹಕಾರಕ್ಕೆ ಧನ್ಯವಾದ. ಟೀಸರ್, ಟ್ರೈಲರ್, ಮತ್ತು ಹಾಡುಗಳ ಮೂಲಕ S/O ಮುತ್ತಣ್ಣ ಈಗಾಗಲೇ ಗಮನ ಸೆಳೆದಿದೆ. ಚಿತ್ರವೂ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ಪ್ರಣಾಂ ದೇವರಾಜ್ ಮಾತನಾಡಿ, “ಈ ಚಿತ್ರದಲ್ಲಿ ರಂಗಾಯಣ ರಘು ಅವರು ನನ್ನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ತಂದೆಯ ಜೊತೆ ಸಮಯ ಕಳೆದಂತೆ ಇತ್ತು. ಆರು ವರ್ಷಗಳ ಬಳಿಕ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸುಮಧುರ ಹಾಡಿನ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ,” ಎಂದರು.
ನಾಯಕಿ ಖುಷಿ ರವಿ ಕೂಡ ಚಿತ್ರದಲ್ಲಿ ನಟಿಸಿರುವ ಅನುಭವದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಮತ್ತು ಸಂಕಲನಕಾರ ಹರೀಶ್ ಕೊಮ್ಮೆ ತಮ್ಮ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ತಬಲ ನಾಣಿ, ಸುಧಾ ಬೆಳವಾಡಿ, ಗಿರಿ ಮುಂತಾದವರು ಇದ್ದಾರೆ.
S/O ಮುತ್ತಣ್ಣ ಚಿತ್ರವು ಭಾವನಾತ್ಮಕ ಕಥೆಯ ಜೊತೆಗೆ ದೃಶ್ಯ ರಂಜಕತೆಯನ್ನು ಒಡ್ಡಲಿದ್ದು, ಸೆಪ್ಟೆಂಬರ್ 12ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.