ಹೈದರಾಬಾದ್: ಖ್ಯಾತ ಗಾಯಕಿ ಎಸ್. ಜಾನಕಿ ಅವರ ಪುತ್ರ ಹಾಗೂ ಪ್ರಸಿದ್ಧ ಭರತನಾಟ್ಯ ಕಲಾವಿದ ಮುರಳಿಕೃಷ್ಣ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಗ್ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡ ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ..
ಮುರಳಿಕೃಷ್ಣ ಕೇವಲ ಒಬ್ಬ ಭರತನಾಟ್ಯ ಕಲಾವಿದ ಮಾತ್ರವಲ್ಲ, ನೃತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದ ನೃತ್ಯ ಸಂಯೋಜಕ ಹಾಗೂ ತರಬೇತಿದಾರರಾಗಿದ್ದರು. ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ದೇಶಾದ್ಯಂತ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದಿದ್ದರು.
ಸಿನಿಮಾ ಕ್ಷೇತ್ರದಲ್ಲಿಯೂ ಮುರಳಿಕೃಷ್ಣ ತಮ್ಮದೇ ಆದ ಛಾಪು ಮೂಡಿಸಿದ್ದರು. ಹಲವು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಿಗೆ ಅವರು ಭರತನಾಟ್ಯ ಆಧಾರಿತ ನೃತ್ಯ ಸಂಯೋಜನೆಗಳನ್ನು ರೂಪಿಸಿದ್ದರು. ಶಾಸ್ತ್ರೀಯ ನೃತ್ಯವನ್ನು ಸಿನಿಮಾ ಪರದೆಯ ಮೇಲೆ ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಮುರಳಿಕೃಷ್ಣ ಭರತನಾಟ್ಯ ಹಾಗೂ ಕುಚಿಪುಡಿ ನೃತ್ಯಗಾತಿ ಉಮಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಉಮಾ ಮತ್ತು ಮುರಳಿಕೃಷ್ಣ ವಿಚ್ಛೇದನ ಪಡೆದು ಬೇರೆಯಾಗಿದ್ದರು ಎನ್ನಲಾಗಿದೆ. ಬಳಿಕ ಮುರಳಿಕೃಷ್ಣ ಕೆಲ ಕಾಲ ಮೈಸೂರಿನಲ್ಲಿ ವಾಸವಾಗಿದ್ದು, ಆ ಅವಧಿಯಲ್ಲಿ ತಾಯಿ ಎಸ್. ಜಾನಕಿ ಅವರೂ ಮೈಸೂರಿನಲ್ಲಿ ನೆಲೆಸಿದ್ದರು. ನಂತರ ಇಬ್ಬರೂ ಹೈದರಾಬಾದ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು.
ಮುರಳಿಕೃಷ್ಣ ಅವರ ನಿಧನ ಸುದ್ದಿ ತಿಳಿದ ಕೂಡಲೇ ಸಂಗೀತ ಮತ್ತು ನೃತ್ಯ ಕ್ಷೇತ್ರದ ಅನೇಕ ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, ಅವರೊಂದಿಗೆ ಕಳೆದ ಕ್ಷಣಗಳನ್ನು ಸ್ಮರಿಸಿದ್ದಾರೆ.
ಮುರಳಿಕೃಷ್ಣ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಹೈದರಾಬಾದ್‌ನಲ್ಲಿಯೇ ನೆರವೇರಲಿದ್ದು, ನಾಳೆ ಬೆಳಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮುರಳಿಕೃಷ್ಣ ಅವರ ಅಗಲಿಕೆ ಭಾರತೀಯ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.





