ರಿಷಬ್ ಶೆಟ್ಟಿ.. ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಅಸಾಮಾನ್ಯನಾಗಿ ಬೆಳೆದು, ಇಡೀ ವಿಶ್ವ ಸಿನಿದುನಿಯಾ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವ್ರ ಬದುಕು ನಿಜಕ್ಕೂ ರೋಚಕ, ರೋಮಾಂಚಕ. ಬದುಕಿಗಾಗಿ ಮಾಡದ ಉದ್ಯೋಗವೇ ಇಲ್ಲ. ರಿಕ್ಕಿ ಸಿನಿಮಾದ ಒಂದೇ ಒಂದು ಶೋಗಾಗಿ ಒದ್ದಾಡಿದ್ದ ರಿಷಬ್, ಇಂದು ಕಾಂತಾರ ಚಿತ್ರದ ಟಿಕೆಟ್ಸ್‌ಗಾಗಿ ಜನ ಗುದ್ದಾಡುವಂತೆ ಮಾಡಿದ್ದಾರೆ. ಝೀರೋದಿಂದ ಹೀರೋ ಆಗಿ ಬೆಳೆದು ನಿಂತಿರೋ ಶೆಟ್ರ ಸ್ಫೂರ್ತಿದಾಯಕ ಕಥೆಯನ್ನ ಒಮ್ಮೆ ನೋಡಿ.
‘ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ನಾಳೆಯಿಂದ ಸಂಜೆ 7 ಗಂಟೆಗೆ ಶೋ ಸಿಕ್ತು’.. ಹೀಗಂತ 2016ರ ಫೆಬ್ರವರಿ 6ರ ಸಂಜೆ 4 ಗಂಟೆಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ರು ರಿಷಬ್ ಶೆಟ್ಟಿ. ಅಂದಹಾಗೆ ಆಗ ರಿಷಬ್‌ರ ಚೊಚ್ಚಲ ನಿರ್ದೇಶನದ ರಿಕ್ಕಿ ಸಿನಿಮಾ ರಿಲೀಸ್ ಆಗಿತ್ತು. ರಕ್ಷಿತ್ ಶೆಟ್ಟಿಗೆ ರಿಷಬ್ ನಿರ್ದೇಶಿಸಿದ್ದ ಈ ಸಿನಿಮಾದ ಒಂದೊಂದು ಶೋಗಾಗಿ ಕೂಡ ಡಿಸ್ಟ್ರಿಬ್ಯೂಟರ್ ಹಾಗೂ ಥಿಯೇಟರ್ ಮಾಲೀಕರ ಬಳಿ ಗೋಗರೆದಿದ್ದರು ರಿಷಬ್ ಶೆಟ್ಟಿ.
9ವರ್ಷದ ಹಿಂದೆ ಒಂದೇ ಒಂದು ಶೋಗಾಗಿ ರಿಷಬ್ ಒದ್ದಾಟ
ಕಾಂತಾರ ಚಿತ್ರದ ಟಿಕೆಟ್ಸ್ ಗಾಗಿ ಇಂದು ಪ್ರೇಕ್ಷಕರ ಗುದ್ದಾಟ..!!
ಆದ್ರೀಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕನಾಗಿ ಅವರೇ ಸೂಪರ್ ಅಪ್ಡೇಟ್ ಆಗಿದ್ದಾರೆ. ಅದ್ಭುತ ನಿರ್ದೇಶಕ, ನಟನಾಗಿ ಬೆಳೆದು ನಿಂತಿದ್ದಾರೆ. ಇಂದು ಕಾಂತಾರ ಚಾಪ್ಟರ್-1 ಸಿನಿಮಾದ ಟಿಕೆಟ್ಸ್‌ಗಾಗಿ ಜನ ಪರದಾಡುವ ರೇಂಜ್‌ಗೆ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಇದಲ್ಲವೇ ಬೆಳವಣಿಗೆ ಅಂದ್ರೆ..? ಯೆಸ್.. ಕಾಂತಾರ-1 ಸಿನಿಮಾನ ಇಡೀ ವಿಶ್ವವೇ ಪ್ರಶಂಸಿಸುತ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 7 ಭಾಷೆಗಳಲ್ಲಿ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ನಿನ್ನೆ ರಿಲೀಸ್ ಆದ ಒಂದೇ ದಿನ ಬುಕ್ ಮೈ ಶೋನಲ್ಲಿ ಬರೋಬ್ಬರಿ 1.28 ಮಿಲಿಯನ್ ಟಿಕೆಟ್ಸ್ ಆನ್‌ಲೈನ್‌ನಲ್ಲಿ ಬುಕ್ ಆಗಿವೆ. ಅಲ್ಲಿಗೆ 10 ಲಕ್ಷ 28 ಸಾವಿರ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ.
ಈ ಮೂಲಕ ಬುಕ್ ಮೈ ಶೋನಲ್ಲಿ ಕಾಂತಾರ ಸಿನಿಮಾ ಟ್ರೆಂಡಿಂಗ್ ನಂಬರ್ 1ನಲ್ಲಿ ರಾರಾಜಿಸ್ತಿದೆ. ಆದ್ರೆ ರಿಷಬ್ ಇಂದು ಇಷ್ಟರ ಮಟ್ಟಿಗೆ ಸೆನ್ಸೇಷನಲ್ ಡೈರೆಕ್ಟರ್ ಹಾಗೂ ಅತ್ಯದ್ಭುತ ಕಲಾವಿದನಾಗಿ ಬರೆಳೆಯೋದ್ರ ಹಿಂದೆ ಒಂದು ದೊಡ್ಡ ರೋಚಕ ಸ್ಟೋರಿ ಇದೆ. ಚಿತ್ರರಂಗಕ್ಕೆ ಬರೋಕೆ ಮುನ್ನ ಶೆಟ್ರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬದುಕಿಗಾಗಿ ಸಾಕಷ್ಟು ಒದ್ದಾಡಿದ್ದಾರೆ ಶೆಟ್ರು.
ಅಂದು ಚೊಚ್ಚಲ ನಿರ್ದೇಶನದ ‘ರಿಕ್ಕಿ’ಗಾಗಿ ಗೋಗರೆದಿದ್ದ ಶೆಟ್ರು
ಈಗ ಕಾಂತಾರ 10 ಲಕ್ಷ 28 ಸಾವಿರ ಟಿಕೆಟ್ಸ್ ಸೋಲ್ಡ್ ಔಟ್..!
ಉಡುಪಿಯ ಕುಂದಾಪುರದ ಕೆರಾಡಿ ಅನ್ನೋ ಸಣ್ಣ ಗ್ರಾಮದ ಭಂಟ್ ಫ್ಯಾಮಿಲಿಯಲ್ಲಿ ಜನಿಸಿದ ರಿಷಬ್ ಶೆಟ್ಟಿ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಸಿನಿಮಾರಂಗಕ್ಕಾಗಿ ನಂತರ ರಿಷಬ್ ಶೆಟ್ಟಿಯಾಗಿ ಹೆಸರು ಬದಲಿಸಿಕೊಂಡ್ರು ಶೆಟ್ರು. ಅಂದಹಾಗೆ ಕೆರಾಡಿಯಲ್ಲಿ ಶಾಲೆ ಮುಗಿಸಿ, ಬಿಕಾಂ ಓದಲು ಬೆಂಗಳೂರಿನ ವಿಜಯ ಕಾಲೇಜ್‌ಗೆ ಸೇರಿಕೊಂಡ ಶೆಟ್ರು, ಆ ಮಧ್ಯೆ ಬದುಕಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನ ಮಾಡಿದ್ರು. ವಾಟರ್ ಕ್ಯಾನ್ ಹಾಕೋದ್ರಿಂದ ಹಿಡಿದು, ಹೋಟೆಲ್‌ಗಳಲ್ಲಿ ಕೆಲಸ, ರಿಯಲ್ ಎಸ್ಟೇಟ್ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ರು.
ವಾಟರ್ ಕ್ಯಾನ್, ಹೋಟೆಲ್, ರಿಯಲ್ ಎಸ್ಟೇಟ್..
ಬದುಕಿಗಾಗಿ ಶೆಟ್ರ ಅಲೆದಾಟ
ಕ್ಲಾಪ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ
ರಂಗಭೂಮಿ ಹಾಗೂ ಯಕ್ಷಗಾನದ ಬಗ್ಗೆ ಅಪಾರ ಒಲವು ಇದ್ದಂತಹ ರಿಷಬ್, ಬೆಂಗಳೂರಿನ ಕಾಲೇಜ್ ದಿನಗಳಲ್ಲೇ ಕುಂದಾಪುರದ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಂತರ ಸರ್ಕಾರಿ ಫಿಲ್ಮ್ ಹಾಗೂ ಟಿವಿ ಇನ್ಸ್‌ಟಿಟ್ಯೂಟ್‌ನಲ್ಲಿ ಡಿಪ್ಲೊಮೋ ಕೋರ್ಸ್‌ಗೆ ಸೇರಿಕೊಂಡರು. ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಅಸಿಸ್ಟೆಂಡ್ ಡೈರೆಕ್ಟರ್ ಹೀಗೆ ನಾನಾ ಕೆಲಸ ಕಾರ್ಯಗಳನ್ನ ಮಾಡುವ ಮೂಲಕ ಚಿತ್ರರಂಗದ ಗ್ರೌಂಡ್ ಲೆವೆಲ್‌ನಿಂದ ಬೆಳೆದರು.
ರಕ್ಷಿತ್ ಶೆಟ್ಟಿ ಗೆಳೆತನ ಸಿಕ್ಕ ಬಳಿಕ ರಿಷಬ್ ನಟಿಸಿದ ಮೊದಲ ಸಿನಿಮಾ ತುಘಲಕ್. ಲೂಸಿಯಾ, ಉಳಿದವರು ಕಂಡಂತೆ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದ ರಿಷಬ್, ನಂತ್ರ 2016ರಲ್ಲಿ ರಕ್ಷಿತ್ ಶೆಟ್ಟಿಗೆ ರಿಕ್ಕಿ ಅನ್ನೋ ಸಿನಿಮಾನ ನಿರ್ದೇಶನ ಮಾಡ್ತಾರೆ. ಅದೇ ರಿಷಬ್ ಆ್ಯಕ್ಷನ್ ಕಟ್ ಹೇಳಿದ ಚೊಚ್ಚಲ ಚಿತ್ರ. ನಂತ್ರ ಕಿರಿಕ್ ಪಾರ್ಟಿ ಸಿನಿಮಾ ಮಾಡಿದ ಹಂಗಾಮದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬೆಲ್‌ಬಾಟಂ ಚಿತ್ರಗಳಿಂದ ಎಲ್ಲರ ದಿಲ್ ದೋಚಿದ್ರು. ನಟ ಹಾಗೂ ಹಾಗೂ ನಿರ್ದೇಶಕನಾಗಿಯೂ ಕೂಡ ರಿಷಬ್ ಸಕ್ಸಸ್ ಕಂಡರು. ಅಷ್ಟೇ ಅಲ್ಲ ಒಂದಷ್ಟು ಸಿನಿಮಾಗಳನ್ನ ತಮ್ಮದೇ ಬ್ಯಾನರ್‌ನಡಿ ನಿರ್ಮಾಣ ಮಾಡಿ, ತನ್ನಂತೆ ಕಷ್ಟದಲ್ಲಿರೋ ಸಿನಿಮೋತ್ಸಾಹಿಗಳ ಕನಸುಗಳಿಗೆ ರೆಕ್ಕೆ ಕಟ್ಟಿದರು. ನಂತರ ಬಂದತಂಹ ಕಾಂತಾರ ಸಿನಿಮಾ ನಮ್ಮ ಕನ್ನಡ ಚಿತ್ರರಂಗದ ದಂತಕಥೆಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು ಗೊತ್ತೇಯಿದೆ. ಒಮ್ಮೆ ಅಲ್ಲ ಎರಡೆರಡು ಬಾರಿ ಸ್ಟೇಟ್ ಹಾಗೂ ನ್ಯಾಷನಲ್ ಅವಾರ್ಡ್‌ಗಳನ್ನ ಮುಡಿಗೇರಿಸಿಕೊಂಡಿದ್ದಾರೆ ರಿಷಬ್.
ಸ್ಯಾಂಡಲ್‌ವುಡ್‌ನ ಗೇಮ್ ಚೇಂಜರ್ ಆದ್ರು ರಿಷಬ್ ಶೆಟ್ಟಿ..!
ರಜನಿ, ಹೃತಿಕ್, ಪ್ರಭಾಸ್, NTR.. ಎಲ್ಲರಲ್ಲೂ ಕಾಂತಾರ ಓಟ
ಯೆಸ್.. ಡಿವೈನ್ ಸ್ಟಾರ್ ಆಗಿ ಕರಾವಳಿ ನೆಲದ ದೈವಿಕ ಭಾವನೆಗಳನ್ನ ವಿಶ್ವ ಸಿನಿದುನಿಯಾಗಿ ಪರಿಚಯಿಸ್ತಿರೋ ರಿಷಬ್ ಶೆಟ್ಟಿ, ಒಂಥರಾ ತುಳುನಾಡು ಹಾಗೂ ಸ್ಯಾಂಡಲ್‌ವುಡ್ ಪಾಲಿಗೆ ಗೇಮ್ ಚೇಂಜರ್ ಆಗಿದ್ದಾರೆ. ಸಿನಿಮಾ ಅನ್ನೋದು ವ್ಯವಹಾರವಷ್ಟೇ ಅಲ್ಲ, ಸಮಾಜದ ಕೈಗನ್ನಡಿ. ಅದನ್ನ ತಮ್ಮ ಚಿತ್ರಗಳ ಮೂಲಕ ಜನರ ಮುಂದೆ ತರುವ ಕಾರ್ಯಗಳನ್ನ ಮಾಡ್ತಿದ್ದಾರೆ ರಿಷಬ್ ಶೆಟ್ಟಿ.
14 ಕೋಟಿ ಬಜೆಟ್‌ನ ಕಾಂತಾರ ಸಿನಿಮಾ 450 ಕೋಟಿ ಬ್ಯುಸಿನೆಸ್ ಮಾಡಿದ್ದು ತಮಾಷೆಯ ಮಾತಲ್ಲ. ಇದೀಗ ಕಾಂತಾರ ಪ್ರೀಕ್ವೆಲ್ ಕಾಂತಾರ ಚಾಪ್ಟರ್-1 ಕೂಡ ಕೆಜಿಎಫ್ ರೀತಿ ಬಾಕ್ಸ್ ಆಫೀಸ್ ದಾಖಲೆಗಳನ್ನ ಮಾಡುವಲ್ಲಿ ನಾಗಾಲೋಟ ಮುಂದುವರೆಸಿದೆ. ಕಾಂತಾರ ಸಿನಿಮಾದ ಬಗ್ಗೆ ಸಾಕಷ್ಟು ಮಂದಿ ಸೆನ್ಸೇಷನಲ್ ಡೈರೆಕ್ಟರ್‌ಗಳಾದ ಪ್ರಶಾಂತ್ ವರ್ಮಾ, ಸಂದೀಪ್ ರೆಡ್ಡಿ ವಂಗಾ, ಸಂತೋಷ್ ಆನಂದ್‌ರಾಮ್ ಹಾಗೂ ಇತರರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಪ್ರಭಾಸ್, ಜೂನಿಯರ್ ಎನ್‌ಟಿಆರ್ ಅಂತಹ ಸೂಪರ್ ಸ್ಟಾರ್ಸ್ ಕೂಡ ಪೋಸ್ಟ್‌ಗಳನ್ನ ಹಾಕಿ, ತಂಡಕ್ಕೆ ಶುಭ ಹಾರೈಸಿದ್ದಾರೆ.
ಸದ್ಯ ಕಾಂತಾರ-1 ಬಗ್ಗೆ ಇಡೀ ವಿಶ್ವವೇ ಕೊಂಡಾಡ್ತಿದೆ. ಸಿನಿಮಾಗಾಗಿ ರಿಷಬ್ ಮಾಡಿರೋ ಸಂಶೋಧನೆ, ಸಿನಿಮಾದ ಮೇಕಿಂಗ್, ಪಾತ್ರಗಳು, ಅದರಲ್ಲಿರೋ ತುಳುನಾಡಿನ ಮೂಲ ದೈವಿಕ ಅಂಶಗಳು ಹೀಗೆ ಎಲ್ಲವೂ ಜನಕ್ಕೆ ಕನೆಕ್ಟ್ ಆಗ್ತಿವೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸಿನಿಮಾ ಅಥ್ವಾ ಈಗ ಅನೌನ್ಸ್ ಆಗಿರೋ ಕಾಂತಾರ ಎರಡನೇ ಅಧ್ಯಾಯ, ನಮ್ಮ ಕನ್ನಡಕ್ಕೆ ಕಂಡಿತ ಆಸ್ಕರ್ ತಂದೇ ತರಲಿದೆ ಅನ್ನೋ ಭರವಸೆ ಹುಟ್ಟಿದೆ.





