ರೇಣುಕಾಸ್ವಾಮಿ ಕೇಸ್: ಇಂದು ನಟ ದರ್ಶನ್ & ಗ್ಯಾಂಗ್‌ ವಿರುದ್ಧ ದೋಷಾರೋಪ ನಿಗದಿ

Untitled design 2025 09 25t110631.397

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 25, 2025) ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ನಿರ್ಣಾಯಕ ದಿನ. ಈ ಕೇಸ್‌ನ ಪ್ರಮುಖ ಆರೋಪಿಗಳಾದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ದೋಷಾರೋಪಣೆ (ಚಾರ್ಜ್ ಫ್ರೇಮ್) ನಿಗದಿಯಾಗಲಿದೆ.

ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಅಪಹರಣ, ಕೊಲೆ, ಸುಲಿಗೆ, ಮತ್ತು ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳಿವೆ. 57ನೇ ಸಿಸಿಹೆಚ್ ಕೋರ್ಟ್‌ನಿಂದ ಎಲ್ಲಾ ಆರೋಪಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಿನಿಂದ ಬಿಗಿ ಭದ್ರತೆಯೊಂದಿಗೆ ಕೋರ್ಟ್‌ಗೆ ಕರೆತರಲಾಗುವುದು.

ನ್ಯಾಯಾಧೀಶರು ಆರೋಪಿಗಳಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಲಿದ್ದಾರೆ. “ನೀವು ತಪ್ಪನ್ನು ಒಪ್ಪಿಕೊಳ್ಳುತ್ತೀರಾ, ಅಥವಾ ವಿಚಾರಣೆಗೆ ಒಳಗಾಗಲು ಬಯಸುತ್ತೀರಾ?” ಎಂಬ ಪ್ರಶ್ನೆಯನ್ನು ಆರೋಪಿಗಳಿಗೆ ಕೇಳಲಾಗುವುದು. ಒಂದು ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡರೆ, ಶಿಕ್ಷೆಯ ಕುರಿತಾದ ತೀರ್ಪು ಶೀಘ್ರವಾಗಿ ಬರಬಹುದು. ಆದರೆ, ವಿಚಾರಣೆಗೆ ಒಳಗಾಗಲು ಆರೋಪಿಗಳು ನಿರ್ಧರಿಸಿದರೆ, ಕೇಸ್ ಮುಂದಿನ ಹಂತಕ್ಕೆ ಸಾಗಲಿದೆ.

ಇದೇ ವೇಳೆ, ದರ್ಶನ್ ಸಲ್ಲಿಸಿರುವ ಜೈಲಿನ ಸೌಲಭ್ಯಕ್ಕೆ ಸಂಬಂಧಿಸಿದ ಅರ್ಜಿಯ ಕುರಿತು ಕೂಡ ಇಂದು ಆದೇಶ ಪ್ರಕಟವಾಗಲಿದೆ. ಜೈಲಿನಲ್ಲಿ ಹಾಸಿಗೆ, ದಿಂಬು, ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋರ್ಟ್ ಆದೇಶಿಸಿದ್ದರೂ, ಜೈಲು ಅಧಿಕಾರಿಗಳು ಈ ಆದೇಶವನ್ನು ಪಾಲಿಸಿಲ್ಲ ಎಂದು ದರ್ಶನ್ ಆರೋಪಿಸಿದ್ದಾರೆ. ಈ ವಿಷಯದ ಕುರಿತು ಕೋರ್ಟ್ ಇಂದು ತನ್ನ ತೀರ್ಪನ್ನು ಘೋಷಿಸಲಿದೆ.

Exit mobile version