ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ (ರವಿ ಮೋಹನ್) ತಮ್ಮ ವೈಯಕ್ತಿಕ ಜೀವನದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ರವಿ, ಬಂಗಾರದ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಎಲ್ಲರ ಗಮನ ಸೆಳೆದರು. ಆದರೆ, ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರವಿ ತಮ್ಮ ಮಾಜಿ ಪತ್ನಿ ಆರತಿಯಿಂದ ಕೆಲ ತಿಂಗಳ ಹಿಂದೆ ವಿಚ್ಛೇದನ ಘೋಷಿಸಿದ್ದರು. ಆದರೆ, ಕೆನಿಷಾ ಜೊತೆ ಒಟ್ಟಿಗೆ ಕಾಣಿಸಿಕೊಂಡಿರುವುದು ತಮಿಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ರವಿ ಮತ್ತು ಕೆನಿಷಾ ನಡುವೆ ಸಂಬಂಧ ಇದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆಗ ಇಬ್ಬರೂ ತಾವು ಕೇವಲ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈಗ ಇಬ್ಬರೂ ಒಟ್ಟಿಗೆ ಮದುವೆಯೊಂದರಲ್ಲಿ ದಂಪತಿಗಳಂತೆ ಕಾಣಿಸಿಕೊಂಡಿರುವುದು ವದಂತಿಗಳಿಗೆ ಪುಷ್ಠಿ ನೀಡಿದೆ. ರವಿಯ ವಿಚ್ಛೇದನಕ್ಕೆ ಕೆನಿಷಾ ಕಾರಣ ಆರೋಪಗಳನ್ನು ಆಗ ರವಿ ಮತ್ತು ಕೆನಿಷಾ ತಳ್ಳಿಹಾಕಿದ್ದರು. ಆದರೆ, ಇತ್ತೀಚಿನ ಘಟನೆಯಿಂದ ಆ ಆರೋಪಗಳು ಸತ್ಯವಾಗಿರಬಹುದೇ ಎಂಬ ಅನುಮಾನಗಳು ಮೂಡಿವೆ.
ವೇಲ್ಸ್ ಫಿಲ್ಮ್ಸ್ ಮಾಲೀಕರ ಮಗಳ ಮದುವೆಯಲ್ಲಿ ರವಿ ಮತ್ತು ಕೆನಿಷಾ ಆಕರ್ಷಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ರವಿ ಪಾರಂಪರಿಕ ಶರ್ಟ್ ಮತ್ತು ಧೋತಿಯಲ್ಲಿ, ಕೆನಿಷಾ ಬಂಗಾರದ ಬಣ್ಣದ ಸೀರೆಯಲ್ಲಿ ಗಮನ ಸೆಳೆದರು. ಇಬ್ಬರೂ ಜೋಡಿಯಂತೆ ಓಡಾಡಿದ್ದು, ಫೋಟೋಗೆ ದಂಪತಿಗಳಂತೆ ಪೋಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಭಾರೀ ಚರ್ಚೆಗೆ ಕಾರಣವಾಗಿವೆ. “ಜಯಂ ರವಿ ಮತ್ತು ಕೆನಿಷಾ ಈಗ ಒಟ್ಟಿಗೆ ಇದ್ದಾರೆಯೇ?” ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
2024ರ ಸೆಪ್ಟೆಂಬರ್‌ನಲ್ಲಿ ರವಿ ಮತ್ತು ಆರತಿ ವಿಚ್ಛೇದನ ಘೋಷಿಸಿದ ನಂತರ, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದರು. ಆರತಿ, ರವಿಯ ವಿರುದ್ಧ ಕೆನಿಷಾಳೊಂದಿಗಿನ ಸಂಬಂಧದ ಆರೋಪ ಮಾಡಿದ್ದರು. ಆದರೆ, ಕೆನಿಷಾ ನೀಡಿದ ಸಂದರ್ಶನವೊಂದರಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದರು. “ನಾನು ರವಿಯನ್ನು ವೃತ್ತಿಪರ ಕಾರಣಗಳಿಗಾಗಿ ಭೇಟಿಯಾಗುತ್ತಿದ್ದೆ. ಆರತಿ ಮತ್ತು ಅವರ ಕುಟುಂಬದವರು ನನ್ನ ವಿರುದ್ಧ ಮಾಡಿದ ಆರೋಪಗಳು ಸುಳ್ಳು,” ಎಂದಿದ್ದರು ಕೆನಿಷಾ.
ಕೆನಿಷಾ ತಮ್ಮ ಭಾವನಾತ್ಮಕ ಭಾಷಣದಲ್ಲಿ, “ಆರತಿ ಮತ್ತು ಅವರ ಕುಟುಂಬದಿಂದ ನನಗೆ ಆದ ಕಿರುಕುಳವು ನನ್ನ ಹೆತ್ತವರನ್ನು ಕಳೆದುಕೊಂಡ ನೋವಿಗಿಂತಲೂ ದೊಡ್ಡದು. ಈ ಕಿರುಕುಳದ ಪುರಾವೆಗಳನ್ನು ನ್ಯಾಯಾಲಯದಲ್ಲಿ ಇಡಲು ಸಿದ್ಧ,” ಎಂದು ಹೇಳಿದ್ದರು. ಈ ಹೇಳಿಕೆಯೂ ಕೂಡ ಚರ್ಚೆಗೆ ಕಾರಣವಾಗಿತ್ತು.
ಇತ್ತ ಆರತಿ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿಲ್ಲ. ರವಿ ಕೂಡ ಇನ್‌ಸ್ಟಾಗ್ರಾಮ್‌ನಿಂದ ಆರತಿ ಮತ್ತು ಮಕ್ಕಳ ಜೊತೆಗಿನ ಫೋಟೋಗಳನ್ನು ತೆಗೆದುಹಾಕಿದ್ದಾರೆ. ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಮುದ್ದಾದ ಜೋಡಿಯೆಂದು ಕರೆಸಿಕೊಂಡಿದ್ದ ರವಿ-ಆರತಿ ದೂರವಾಗಿರುವುದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಈಗ ಕೆನಿಷಾ ಜೊತೆ ರವಿಯ ಫೋಟೋಗಳು ವೈರಲ್ ಆಗುತ್ತಿರುವಾಗ, ಈ ವಿವಾದಕ್ಕೆ ಇನ್ನಷ್ಟು ತಿರುವು ಸಿಗುವ ಸಾಧ್ಯತೆಯಿದೆ.





