ನ್ಯೂಯಾರ್ಕ್‌ನ 43ನೇ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಭಾಗವಹಿಸಿದರು. ಮ್ಯಾನ್‌ಹಾಟನ್ ರಸ್ತೆಗಳಲ್ಲಿ ಕೈ ಕೈ ಹಿಡಿದು ನಡೆದ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ಅವರ ಪ್ರೇಮ ಸಂಬಂಧದ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ‘ಗೀತ ಗೋವಿಂದಂ’ (2018) ಮತ್ತು ‘ಡಿಯರ್ ಕಾಮ್ರೇಡ್’ (2019) ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದು, ಅಂದಿನಿಂದಲೂ ಇವರಿಬ್ಬರ ನಡುವೆ ಲವ್ವಿಡವ್ವಿ ನಡೆಯುತ್ತಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ಇಬ್ಬರು ಓಡಾಡುತ್ತಿರುವುದು ಇವರ ಪ್ರೇಮ ಸಂಬಂಧವನ್ನು ಖಚಿತಪಡಿಸಿದೆ.
ನ್ಯೂಯಾರ್ಕ್‌ನಲ್ಲಿ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ವಿಜಯ್ ದೇವರಕೊಂಡ ಬಿಳಿ ಶೇರ್ವಾನಿಯಲ್ಲಿ ಮಿಂಚಿದರೆ, ರಶ್ಮಿಕಾ ಕೆಂಪು ಸೀರೆಯಲ್ಲಿ ಆಕರ್ಷಕವಾಗಿ ಕಂಡರು. ಅವರು ಭಾರತೀಯ ಧ್ವಜವನ್ನು ಬೀಸುತ್ತಾ, ಜನರನ್ನು ಉದ್ದೇಶಿಸಿ ಮಾತನಾಡಿದ ದೃಶ್ಯಗಳು ಅಭಿಮಾನಿಗಳ ಮನಗೆದ್ದಿವೆ. ‘ವಿರಶ್’ (ವಿಜಯ್-ರಶ್ಮಿಕಾ) ಜೋಡಿಯನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದಾರೆ. ಕೆಲವರು “ವಿರಶ್ ಈಸ್ ಬ್ಯಾಕ್” ಎಂದು ಹೇಳಿದ್ದಾರೆ.
ಇವರಿಬ್ಬರ ಪ್ರೇಮ ಸಂಬಂಧ ‘ಗೀತ ಗೋವಿಂದಂ’ ಚಿತ್ರದ ಸೆಟ್‌ನಿಂದಲೇ ಆರಂಭವಾಯಿತು ಎಂದು ಚಿತ್ರರಂಗದ ಒಳಗಿನ ಮೂಲಗಳು ತಿಳಿಸಿವೆ. ಇತ್ತೀಚೆಗೆ, ‘ಗೀತ ಗೋವಿಂದಂ’ ಚಿತ್ರಕ್ಕೆ 7 ವರ್ಷ ತುಂಬಿದ ಸಂತಸವನ್ನು ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ, ಮುಂಬರುವ ‘ವಿಡಿ 14’ ಚಿತ್ರದಲ್ಲಿ ರಾಹುಲ್ ಸಂಕೃತ್ಯಾನ್ ನಿರ್ದೇಶನದಲ್ಲಿ ಇವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.