ಬೆಂಗಳೂರು, ಮಾರ್ಚ್ 16: ಕನ್ನಡದ ಕೊಡಗಿನ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆಯ ಹಳದಿ ಸಮಾರಂಭದ (Haldi Ceremony) ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೇ ಉದಯಪುರದಲ್ಲಿ (Udaipur) ಅದ್ಧೂರಿಯಾಗಿ ಮದುವೆಯಾದ ಈ ಜೋಡಿ, ತಮ್ಮ ಪ್ರೀ ವೆಡ್ಡಿಂಗ್ ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಹಳದಿಯಲ್ಲಿತ್ತು ಹೋಳಿಯ ಸಂಭ್ರಮ
ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳದಿ ಸಮಾರಂಭದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. “ಹಳದಿ ಕಾರ್ಯಕ್ರಮವು ಸಾಮಾನ್ಯ ಆಚರಣೆಯಂತೆ ಇರದೇ, ಹಳದಿ ಹಾಗೂ ಹೋಳಿ ಸಂಭ್ರಮದ ಮಿಶ್ರಣದಂತಿತ್ತು. ನಾವೆಲ್ಲರೂ ಬಣ್ಣಗಳಲ್ಲಿ ಮಜಾ ಮಾಡಿದ್ದೇವೆ. ಎಷ್ಟು ಬಣ್ಣದಲ್ಲಿ ನೆನೆದಿದ್ದೇವೆ ಎಂದರೆ ಈಗಲೂ ನನ್ನ ಕೂದಲಲ್ಲಿ ಸ್ವಲ್ಪ ಕೆಂಪು ಬಣ್ಣ ಹಾಗೇ ಉಳಿದಿದೆ” ಎಂದು ರಶ್ಮಿಕಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರೀ ವೆಡ್ಡಿಂಗ್ ಗೇಮ್ಸ್ ನಲ್ಲಿ ವಿನ್ನರ್
ಹಳದಿ ದಿನದಂದು ನಡೆದ ಆಟಗಳಲ್ಲಿ ‘ಟೀಮ್ ಬ್ರೈಡ್’ (Team Bride) ಭರ್ಜರಿ ಗೆಲುವು ಸಾಧಿಸಿತ್ತು ಎಂದು ರಶ್ಮಿಕಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. “ಆ ದಿನ ವರ ವಿಜಯ್ ದೇವರಕೊಂಡ ಕೂಡ ಟೀಮ್ ಬ್ರೈಡ್ ಪರವಾಗಿದ್ದರು. ಟೀಮ್ ಬ್ರೈಡ್ನ ಸಹಾಯದಿಂದ ಎಲ್ಲಾ ಆಟಗಳನ್ನೂ ಗೆದ್ದಿದ್ದೇನೆ” ಎಂದು ನಟಿ ನೆನಪಿಸಿಕೊಂಡಿದ್ದಾರೆ.
ಉದಯಪುರದ ಐಟಿಸಿ ಹೋಟೆಲ್ಗೆ ಧನ್ಯವಾದ
ಈ ಸಮಾರಂಭವನ್ನು ಉದಯಪುರದ ಐಟಿಸಿ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿನ ವಾತಾವರಣ, ಸಿಬ್ಬಂದಿ, ಸೇವೆ ಹಾಗೂ ಆಹಾರ ಎಲ್ಲವೂ ಅತ್ಯುತ್ತಮವಾಗಿತ್ತು ಎಂದು ರಶ್ಮಿಕಾ ಶ್ಲಾಘಿಸಿದ್ದಾರೆ. “ಅಲ್ಲೇ ಮದುವೆಯಾಗಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಮತ್ತೆ ಶೀಘ್ರದಲ್ಲೇ ಅಲ್ಲಿ ಭೇಟಿ ನೀಡುತ್ತೇವೆ” ಎಂದಿದ್ದಾರೆ.
ಡಿಸೈನರ್ ಅನಾಮಿಕಾ ಖನ್ನಾಗೆ ಧನ್ಯವಾದ
ರಶ್ಮಿಕಾ ಅವರ ಮದುವೆಯ ಉಡುಪು ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಮಾತನಾಡಿರುವ ಅವರು, “ನನ್ನ ಕಲ್ಪನೆಯ ಉಡುಪನ್ನು ವಾಸ್ತವವಾಗಿಸಿದ ಪ್ರಸಿದ್ಧ ಡಿಸೈನರ್ ಅನಾಮಿಕಾ ಖನ್ನಾ (Anamika Khanna) ಅವರಿಗೆ ವಿಶೇಧ ಧನ್ಯವಾದಗಳು” ಎಂದಿದ್ದಾರೆ. ವಿಜಯ್ ದೇವರಕೊಂಡ ಅವರ ಉಡುಪು ಕೂಡ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
ತಮ್ಮ ಮದುವೆಯ ಬಗ್ಗೆ ಮಾತನಾಡಿದ ರಶ್ಮಿಕಾ, “ಇದು ನಮ್ಮಿಬ್ಬರ ಸುಂದರ ಪಯಣದ ಆರಂಭ ಮಾತ್ರ. ನಾವು ನಿಮ್ಮೆಲ್ಲರನ್ನು ಪ್ರೀತಿಸುತ್ತೇವೆ” ಎಂದು ಅಭಿಮಾನಿಗಳಿಗೆ ಶುಭ ಸಂದೇಶ ನೀಡಿದ್ದಾರೆ. ಫೆಬ್ರವರಿ 6 ರಂದು ಉದಯಪುರದಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಬಳಿಕ ಮಾರ್ಚ್ 5ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈಗ ರಶ್ಮಿಕಾ ಹಂಚಿಕೊಂಡಿರುವ ಹಳದಿ ಸಮಾರಂಭದ ಫೋಟೋಗಳು ಮತ್ತೊಮ್ಮೆ ಅಭಿಮಾನಿಗಳಲ್ಲಿ ಮದುವೆಯ ಸಂಭ್ರಮವನ್ನು ಹೆಚ್ಚಿಸಿವೆ.





