ಉದಯಪುರ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಸಪ್ತಪದಿ ತುಳಿದ ಬೆನ್ನಲ್ಲೇ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. “ನನ್ನ ಪತಿ ಮಿಸ್ಟರ್ ವಿಜಯ್ ದೇವರಕೊಂಡ” ಎಂದು ಬರೆದುಕೊಂಡಿದ್ದಾರೆ.
ಕೇವಲ ಫೋಟೋಗಳನ್ನು ಹಂಚಿಕೊಳ್ಳದೇ, ನಿಜವಾದ ಪ್ರೀತಿ ಎಂದರೆ ಏನು ಎಂದು ನನಗೆ ಕಲಿಸಿದ ವ್ಯಕ್ತಿ ಇವರು. ಜೀವನದಲ್ಲಿ ಮನಶಾಂತಿ ಎನ್ನುವುದು ಹೇಗಿರುತ್ತದೆ ಎಂಬುದನ್ನು ಅನುಭವಿಸಲು ಇವರು ಕಾರಣರಾದರು ಎಂದು ರಶ್ಮಿಕಾ ಭಾವುಕರಾಗಿದ್ದಾರೆ.
ದೊಡ್ಡ ಕನಸುಗಳನ್ನು ಕಾಣುವುದು ತಪ್ಪಲ್ಲ ಎಂದು ನನಗೆ ಪ್ರತಿದಿನ ಹೇಳುತ್ತಿದ್ದರು. ನನ್ನ ಕಲ್ಪನೆಗೂ ಮೀರಿದ ಸಾಧನೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ನನ್ನ ಮೇಲೆ ನಂಬಿಕೆ ತುಂಬಿದ ಶಕ್ತಿ ಇವರು ಎಂದು ಪತಿಯನ್ನು ಹೊಗಳಿದ್ದಾರೆ.
ವಿಜ್ಜು ಬಗ್ಗೆ ಒಂದು ಪುಸ್ತಕವೇ ಬರೆಯಬಹುದು
ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ವಿಜಯ್ ಪಾತ್ರವನ್ನು ಸ್ಮರಿಸಿರುವ ರಶ್ಮಿಕಾ, ನಾನು ಯಾವಾಗಲೂ ಯಾವ ರೀತಿಯ ಮಹಿಳೆಯಾಗಬೇಕು ಎಂದು ಕನಸು ಕಂಡಿದ್ದೆನೋ, ಇಂದು ನಾನು ಆ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕಾರಣ ವಿಜಯ್. ವಿಜ್ಜು ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ, ಅವರ ಬಗ್ಗೆ ನಾನು ಒಂದು ಇಡೀ ಪುಸ್ತಕವನ್ನೇ ಬರೆಯಬಲ್ಲೆ. ಇಂದು ನನ್ನ ಹೋರಾಟ, ಸಾಧನೆ, ಸುಖ-ದುಃಖ ಎಲ್ಲದಕ್ಕೂ ಒಂದು ಅರ್ಥ ಸಿಕ್ಕಿದೆ. ಯಾಕೆಂದರೆ ನನ್ನ ಜೀವನದ ಪ್ರತಿ ಹಂತದಲ್ಲೂ ಅವರು ಜೊತೆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಿನ್ನ ಹೆಂಡತಿ ಅನ್ನಿಸಿಕೊಳ್ಳಲು ಕಾಯುತ್ತಿದ್ದೇನೆ
ಲೇಖನದ ಕೊನೆಯಲ್ಲಿ ತಮ್ಮ ಅತೀವ ಸಂಭ್ರಮವನ್ನು ಹೊರಹಾಕಿರುವ ರಶ್ಮಿಕಾ, ನಿನ್ನ ಹೆಂಡತಿಯಾಗಲು ನಾನು ತುಂಬಾ ಅಂದ್ರೆ ತುಂಬಾ ಉತ್ಸುಕಳಾಗಿದ್ದೇನೆ. ನಿನ್ನ ಹೆಂಡತಿ ಎಂದು ಕರೆಸಿಕೊಳ್ಳುವ ದಿನಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ. ಈಗ ಸಂಭ್ರಮ ಶುರುವಾಗಿದೆ. ಬಾ, ನಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಒಂದಾಗಿ ಕಳೆಯೋಣ. ಐ ಲವ್ ಯು ವಿಜಯ್ ಎಂದು ಪ್ರೀತಿಯ ಸುರಿಮಳೆಗರೆದಿದ್ದಾರೆ.
ಸದ್ಯ ಉದಯಪುರದಲ್ಲಿ ನಡೆದ ಈ ಅದ್ಧೂರಿ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ನವಜೋಡಿಗೆ ಶುಭ ಹಾರೈಸಿದ್ದಾರೆ











