ಬೆಂಗಳೂರು: ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಅವರೊಂದಿಗಿನ ಪ್ರೇಮಕಥೆ ಮತ್ತು ವಿವಾಹದ ಕುರಿತಾದ ಸುದ್ದಿಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಇದೀಗ ರಶ್ಮಿಕಾ ಇಟಲಿಯ ರೋಮ್ ನಗರದಿಂದ ಹಂಚಿಕೊಂಡಿರುವ ಫೋಟೋಗಳು ಈ ಎಲ್ಲಾ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಹೊಸ ವರ್ಷದ ಆಚರಣೆಗಾಗಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಐತಿಹಾಸಿಕ ನಗರ ರೋಮ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಈ ಫೋಟೋಗಳಲ್ಲಿ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಶ್ಮಿಕಾ ಮತ್ತು ಆನಂದ್ ಪರಸ್ಪರ ನೋಡುತ್ತಾ ನಗುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಮೂಡಿಸಿದೆ.
ರೋಮ್ ಇಲ್ಲಿಯವರೆಗೆ (Rome so far) ಎಂದು ಶೀರ್ಷಿಕೆ ನೀಡಿರುವ ಈ ಪೋಸ್ಟ್‌ಗೆ ರಶ್ಮಿಕಾ ಟೇಲರ್ ಸ್ವಿಫ್ಟ್ ಅವರ ಹಾಡನ್ನು ಬಳಸಿಕೊಂಡಿದ್ದಾರೆ. ಆನಂದ್ ದೇವರಕೊಂಡ ಜೊತೆಗಿದ್ದಾರೆ ಎಂದರೆ ವಿಜಯ್ ದೇವರಕೊಂಡ ಕೂಡ ಅಲ್ಲಿಯೇ ಇರುವುದು ಖಚಿತ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಂದೇ ರೀತಿಯ ಹಿನ್ನೆಲೆ (Background) ಹೊಂದಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ವಿಜಯ್ ದೇವರಕೊಂಡ ಅವರ ಕುಟುಂಬದ ಪ್ರತಿಯೊಂದು ಸಮಾರಂಭದಲ್ಲಿ ರಶ್ಮಿಕಾ ಭಾಗಿಯಾಗುವುದು ಇವರ ಸಂಬಂಧದ ಆಳವನ್ನು ಸಾಬೀತುಪಡಿಸುತ್ತಿದೆ.
ಮೂಲಗಳ ಪ್ರಕಾರ, 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ರಾಜವೈಭವದ ಅರಮನೆಯಲ್ಲಿ ರಶ್ಮಿಕಾ ಮತ್ತು ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಪ್ರಸಿದ್ಧ ಸ್ಥಳವನ್ನ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದುವರೆಗೆ ರಶ್ಮಿಕಾ ಅಥವಾ ವಿಜಯ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ರೋಮ್ ಪ್ರವಾಸದ ಫೋಟೋಗಳು ಮತ್ತು ಮದುವೆಯ ತಯಾರಿಗಳು ನಡೆಯುತ್ತಿರುವುದು “ವಿರೋಶ್” (ViRash) ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ. ತೆರೆಮರೆಯ ಈ ಪ್ರೇಮಕಥೆ ಶೀಘ್ರದಲ್ಲೇ ಹಸೆಮಣೆ ಏರುವುದನ್ನು ನೋಡಲು ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.





