ಕುಬೇರ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ, ಮತ್ತೊಂದು ಜಬರ್ದಸ್ತ್ ನ್ಯೂಸ್ ಕೊಟ್ಟಿದ್ದಾರೆ. ಗ್ಲಾಮರ್ಗೆ ಫುಲ್ಸ್ಟಾಪ್ ಇಟ್ಟು, ಮಹಿಳಾ ಪ್ರಧಾನ ಚಿತ್ರದ ಮೂಲಕ ಆ್ಯಕ್ಷನ್ ಮಾಡೋಕೆ ಜೈ ಅಂದಿದ್ದಾರೆ. ಚಿತ್ರದ ಫಸ್ಟ್ ಲುಕ್ನ ನಾಲ್ಕು ಚಿತ್ರರಂಗಗಳಲ್ಲಿ ನಾಲ್ಕು ಮಂದಿ ಸೂಪರ್ ಸ್ಟಾರ್ಸ್ ಲಾಂಚ್ ಮಾಡಿದ್ದು, ಕಿಲ್ಲರ್ ಲುಕ್ನಲ್ಲಿ ಕಿಕ್ ಕೊಡ್ತಿರೋ ರಶ್ಮಿಕಾ ಹೊಸ ವರಸೆಯನ್ನ ಪರಿಚಯಿಸ್ತೀವಿ ಬನ್ನಿ.
- ಗ್ಲಾಮರ್ಗೆ ರಶ್ಮಿಕಾ ಗುಡ್ಬೈ.. ಆ್ಯಕ್ಷನ್ಗೆ ‘ಮೈಸಾ’ ಹಾಯ್..!
- ಗೋಂಡ್ ಬುಡಕಟ್ಟು ಮಹಿಳೆ ಲುಕ್ನಲ್ಲಿ ನ್ಯಾಷನಲ್ ಕ್ರಶ್ ಕಿಕ್
- ದೊಡ್ಡ ಮೂಗುತಿ.. ಕೈಯಲ್ಲಿ ವೆಪನ್.. ಮೈಸಾ ರಕ್ತದೋಕುಳಿ
- ಧನುಷ್, ಶಿವಣ್ಣ, ದುಲ್ಕರ್, ವಿಕ್ಕಿಯಿಂದ ಮೈಸಾ ಫಸ್ಟ್ಲುಕ್ !
ರಶ್ಮಿಕಾ ಬರೀ ಗ್ಲಾಮರ್ ಡಾಲ್ ಅಷ್ಟೇ ಅಲ್ಲ, ಗನ್ ಹಿಡಿದು ಘರ್ಜಿಸಬಲ್ಲ, ಕತ್ತಿ ಹಿಡಿದು ಹೋರಾಡಬಲ್ಲ, ಈಟಿಯಿಂದ ಹತ್ತು ಮಂದಿಯನ್ನ ತಿವಿಯಬಲ್ಲಂತಹ ಆ್ಯಕ್ಷನ್ ನಟಿಯೂ ಹೌದು. ಅದಕ್ಕೆ ಲೇಟೆಸ್ಟ್ ಆಗಿ ಲಾಂಚ್ ಆಗಿರೋ ಅವರ ಹೊಚ್ಚ ಹೊಸ ಸಿನಿಮಾ ಮೈಸಾ ಚಿತ್ರದ ಫಸ್ಟ್ ಲುಕ್ ಸಾಕ್ಷಿಯಾಗ್ತಿದೆ. ದೊಡ್ಡದೊಂದು ಮೂಗುತಿ, ಕೈಯಲ್ಲಿ ವೆಪನ್, ಮುಖದಲ್ಲಿ ರಕ್ತದ ಕಲೆಗಳಿಂದ ಯುದ್ಧ ಮಾಡ್ತಿರೋ ಲುಕ್ನಲ್ಲಿ ಸಖತ್ ಕಿಕ್ ಕೊಡ್ತಿದ್ದಾರೆ ರಶ್ಮಿಕಾ ಮಂದಣ್ಣ. ಅಂದಹಾಗೆ ಮೈಸಾ ಅಂದ್ರೆ ಇನ್ನೂ ನೋಡಿರದ ಎಂದರ್ಥ. ಅಲ್ಲಿಗೆ ರಶ್ಮಿಕಾನ ಇನ್ನೂ ನೋಡಿರದ ಲುಕ್ ಅಂತಲೂ ಅಂದುಕೊಳ್ಳಬಹುದು.
ಪುಷ್ಪ-2, ಅನಿಮಲ್, ಛಾವಾ.. ಹೀಗೆ ಹ್ಯಾಟ್ರಿಕ್ ಹಿಟ್ನಿಂದ ತಮ್ಮ ಸ್ಟಾರ್ಡಮ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದ ನ್ಯಾಷನಲ್ ಕ್ರಶ್, ಸಿಕಂದರ್ ಸೋಲಿನಿಂದ ಕುಗ್ಗಲೇ ಇಲ್ಲ. ಕೂಡಲೇ ಕುಬೇರದಿಂದ ಬೌನ್ಸ್ ಬ್ಯಾಕ್ ಆದ್ರು. ಇದೀಗ ತಮ್ಮಲ್ಲಿರೋ ಪ್ರತಿಭೆಯನ್ನ ಡಿಫರೆಂಟ್ ಜಾನರ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಇಡಲು ಮನಸ್ಸು ಮಾಡಿದ್ದಾರೆ. ಸೀತಾರಾಮಂ, ಮಿಷನ್ ಮಜ್ನು ಹಾಗೂ ಛಾವಾ ಚಿತ್ರಗಳಿಂದಲೇ ತನ್ನ ವರ್ಸಟಾಲಿಟಿ ಪ್ರದರ್ಶಿಸಿದ್ರು ರಶ್ಮಿಕಾ.
ಈಗ ಮೈಸಾ ಚಿತ್ರದಿಂದ ತನ್ನಲ್ಲಿರೋ ನಟನಾ ಹಸಿವನ್ನು ಚಿತ್ರರಂಗಕ್ಕೆ ಹಾಗೂ ಚಿತ್ರಪ್ರೇಮಿಗಳಿಗೆ ಪರಿಚಯಿಸಲು ಸಜ್ಜಾಗಿದ್ದಾರೆ. ತೆಲುಗು ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡ್ತಿರೋ ಆ್ಯಕ್ಷನ್ ಥ್ರಿಲ್ಲರ್ ಜಾನರ್ನ ಮೈಸಾ ಚಿತ್ರಕ್ಕೆ ಎರಡು ವರ್ಷಗಳ ಕಾಲ ಕೆಲಸ ಮಾಡಿರೋ ಡೈರೆಕ್ಟರ್ ರವೀಂದ್ರ ಪುಲ್ಲೆ, ಸದ್ಯದಲ್ಲೇ ಶೂಟಿಂಗ್ ಕಿಕ್ಸ್ಟಾರ್ಟ್ ಮಾಡಲಿದ್ದಾರಂತೆ. ಅಂದಹಾಗೆ ರಶ್ಮಿಕಾ ಭಾಗಮತಿಯಲ್ಲಿ ಅನುಷ್ಕಾ ಶೆಟ್ಟಿ ಲುಕ್ನಲ್ಲಿ ಕಾಣಸಿಗುತ್ತಿದ್ದು, ಗೋಂಡ್ ಬುಡಕಟ್ಟು ಮಹಿಳೆಯಂತೆ ಕಾಣ್ತಿದ್ದಾರೆ.
ತ್ರಿಬಲ್ ಆರ್ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೂಡ ಗೋಂಡ್ ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸಿದ್ದು, ರಾಜಮೌಳಿ ಒಂದೇ ಒಂದು ಹಾಡಿನ ಮೂಲಕ ಅವ್ರ ಬದುಕು, ಬವಣೆಯನ್ನ ಬಹಳ ಸೊಗಸಾಗಿ ತೋರಿಸಿದ್ದರು. ಇದೀಗ ಅದೇ ಜನಾಂಗವನ್ನು ಪ್ರತಿನಿಧಿಸ್ತಾರಾ ರಶ್ಮಿಕಾ ಅನ್ನೋದು ಕಾದು ನೋಡಬೇಕಿದೆ. ಇನ್ನೂ ಈ ಚಿತ್ರ ಐದು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ತಯಾರಾಗಲಿದ್ದು, ಶಿವರಾಜ್ಕುಮಾರ್, ಧನುಷ್, ವಿಕ್ಕಿ ಕೌಶಲ್ ಹಾಗೂ ದುಲ್ಕರ್ ಸಲ್ಮಾನ್ ನಾಲ್ಕು ಭಾಷೆಗಳಲ್ಲಿ ಫಸ್ಟ್ಲುಕ್ನ ಡಿಜಿಟಲ್ ಲಾಂಚ್ ಮಾಡಿ, ಶುಭ ಕೋರಿದ್ದಾರೆ.
ಅದೇನೇ ಇರಲಿ, ಗ್ಲಾಮರ್ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ರಶ್ಮಿಕಾ ಮಂದಣ್ಣ, ಆ್ಯಕ್ಷನ್ ಬೇಸ್ಡ್ ಮಹಿಳಾ ಪ್ರಧಾನ ಚಿತ್ರಗಳ ಕಡೆಗೂ ಒಲವು ತೋರಿರುವುದು ವಿಶೇಷ. ರಶ್ಮಿಕಾ ಕನಸು ನನಸಾಗಲಿ. ಮೈಸಾ ದೊಡ್ಡ ಮಟ್ಟದ ಗೆಲುವು ಪಡೆಯಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್