ಕನ್ನಡ ಚಿತ್ರರಂಗದ ಮತ್ತೊಂದು ವಿಭಿನ್ನ ಹಾಗೂ ಬಲಿಷ್ಠ ಕಥೆಯ ಸಿನಿಮಾ “ರಾನಿ” ಇದೀಗ OTT ವೇದಿಕೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾ ZEE5 OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿ ಕೇವಲ ಎರಡೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ “ರಾನಿ”, ಈಗ OTT ಪ್ರೇಕ್ಷಕರ ಹೃದಯವೂ ಗೆದ್ದಿದೆ.
ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ನಿರ್ಮಿಸಿರುವ ಈ ಚಿತ್ರಕ್ಕೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಗುರುತೇಜ್ ಶೆಟ್ಟಿಯವರೇ ಬರೆದಿದ್ದಾರೆ. “ರಾನಿ” ಚಿತ್ರವು ಒಬ್ಬ ಪ್ರತಿಭಾವಂತ ಯುವ ಕಲಾವಿದನ ಬದುಕಿನ ತಿರುವುಗಳನ್ನು ಹೇಳುತ್ತದೆ. ಸಿನಿಮಾದ ನಾಯಕನಾಗಬೇಕೆಂಬ ಕನಸು ಕಟ್ಟಿಕೊಂಡಿರುವ ಯುವಕನೊಬ್ಬ, ಅನಿರೀಕ್ಷಿತ ಘಟನೆಯೊಂದರಲ್ಲಿ ಡಾನ್‌ನ ಮಗನ ಹತ್ಯೆ ಮಾಡಿ ಬಿಡುತ್ತಾನೆ. ಈ ಒಂದು ಘಟನೆ ಅವನ ಬದುಕನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. ನಾಯಕನಾಗಬೇಕಿದ್ದ ವ್ಯಕ್ತಿ, ಪರಿಸ್ಥಿತಿಗಳ ಒತ್ತಡದಿಂದ ಡಾನ್ ಆಗಿ ರೂಪಾಂತರಗೊಳ್ಳುತ್ತಾನೆ.
ಈ ಸಿನಿಮಾದಲ್ಲಿನ ಎರಡು ಶೇಡ್‌ನ ಪಾತ್ರ ಒಬ್ಬ ಕನಸುಗಳ ಯುವಕ ಹಾಗೂ ಮತ್ತೊಬ್ಬ ಕ್ರೂರ ಪರಿಸ್ಥಿತಿಯಲ್ಲಿ ಹುಟ್ಟಿದ ಡಾನ್ ಇವೆರಡನ್ನೂ ಕಿರಣ್ ರಾಜ್ ಅತ್ಯಂತ ನೈಜವಾಗಿ ನಿರ್ವಹಿಸಿದ್ದಾರೆ. ಪೋಸ್ಟರ್‌ಗಳಲ್ಲಿಯೂ ಈ ಡಬಲ್ ಲುಕ್ ಪ್ರೇಕ್ಷಕರ ಗಮನ ಸೆಳೆದಿತ್ತು.
“ರಾನಿ” ಸಿನಿಮಾ 2024ರ ಸೆಪ್ಟೆಂಬರ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದಲೂ ಹಾಗೂ ವಿಮರ್ಶಕರಿಂದಲೂ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಕಥೆ, ಅಭಿನಯ ಹಾಗೂ ಸಂಗೀತಕ್ಕೆ ಶ್ಲಾಘನೆ ದೊರೆತಿತ್ತು.
ಅದಾದ ಬಳಿಕ ಸುಮಾರು ಒಂದೂವರೆ ವರ್ಷಗಳ ನಂತರ, 2026ರ ಜನವರಿ 9ರಂದು ಈ ಸಿನಿಮಾ ZEE5 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತು. ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲೇ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು, OTT ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ.
ಈ ಸಿನಿಮಾದಲ್ಲಿ ಕಿರಣ್ ರಾಜ್ ಜೊತೆ ರಾಧ್ಯ, ಸಮೀಕ್ಷಾ ಹಾಗೂ ಅಪೂರ್ವ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ರವಿ ಶಂಕರ್, ಬಿ. ಸುರೇಶ್, ಗಿರೀಶ್ ಹೆಗ್ಡೆ, ಯಶ್ ಶೆಟ್ಟಿ, ಉಗ್ರಂ ರವಿ, ಉಗ್ರಂ ಮಂಜು, ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಮೈಕೋ ನಾಗರಾಜ್ ಮುಂತಾದ ದೊಡ್ಡ ತಾರಾಗಣ ಚಿತ್ರಕ್ಕೆ ತುಂಬಿದೆ.
ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ ನೀಡಿದ್ದು, ರಾಘವೇಂದ್ರ ಕೋಲಾರ್ ಅವರ ಛಾಯಾಗ್ರಹಣ ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಥಿಯೇಟರ್‌ನಲ್ಲಿ ಗೆದ್ದ ಚಿತ್ರ, OTTಯಲ್ಲೂ ಅದೇ ಮಟ್ಟದ ಮೆಚ್ಚುಗೆ ಪಡೆಯುತ್ತಿರುವುದು ತಂಡದ ಶ್ರಮಕ್ಕೆ ಸಿಕ್ಕ ಸಾರ್ಥಕತೆ.





