ಸ್ಯಾಂಡಲ್‌ವುಡ್‌ನ ಮೋಹಕತಾರೆ ಮತ್ತು ಮಾಜಿ ಸಂಸದೆ ರಮ್ಯಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು, ನಾಪತ್ತೆಯಾಗಿರುವ 29 ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಳೆದ 2025ರ ಜುಲೈ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ವಿರುದ್ಧ ಅವಾಚ್ಯ ಹಾಗೂ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ 43 ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ನಟಿ ರಮ್ಯಾ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ತಾಂತ್ರಿಕ ದಾಖಲೆಗಳ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ FIR ದಾಖಲಿಸಲಾಗಿತ್ತು.

ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!
ಬ್ಯಾಡ್ ಕಮೆಂಟ್ಸ್..29 ಮಂದಿ ಬ್ಯಾಡ್ ಬಾಯ್ಸ್ ಗೆ ಖಾಕಿ ಬಲೆ
ದೂರು ದಾಖಲಾದ ಬಳಿಕ ಸಿಸಿಬಿ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ, 43 ಆರೋಪಿಗಳ ಪೈಕಿ ಈವರೆಗೆ 14 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ 29 ಮಂದಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಪೊಲೀಸರು ಅವರ ಹೆಸರನ್ನು ಅಬ್‌ಸ್ಕ್ಯಾಂಡಿಂಗ್ ಎಂದು ನಮೂದಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿ ಟ್ರಯಲ್ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಳಿದ 29 ಆರೋಪಿಗಳನ್ನು ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ. ಹೀಗಾಗಿ, ತಲೆಮರೆಸಿಕೊಂಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಎಸಿಜೆಎಂ ಕೋರ್ಟ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶ ಬೆನ್ನಲ್ಲೇ ಸಿಸಿಬಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯವನ್ನು ಮತ್ತೆ ಆರಂಭಿಸಿದ್ದಾರೆ.

ಆನ್‌ಲೈನ್ ಅಸಭ್ಯತೆಗೆ ರೆಡ್ ಅಲರ್ಟ್..ಹಂಟಿಂಗ್ ಶುರು
ಟಾರ್ಗೆಟ್ ಮಾಡಿದವ್ರಿಗೆ ರಮ್ಯಾ ಲಾ & ಆರ್ಡರ್ ಕೌಂಟರ್
ಡಿಜಿಟಲ್ ವೇದಿಕೆಗಳಲ್ಲಿ ವ್ಯಕ್ತಿತ್ವ ಹರಣ ಮಾಡುವವರಿಗೆ ಈ ಪ್ರಕರಣವು ಎಚ್ಚರಿಕೆಯ ಗಂಟೆಯಾಗಿದೆ. ಸಿಸಿಬಿ ಮೂಲಗಳ ಪ್ರಕಾರ, ನಾಪತ್ತೆಯಾಗಿರುವ ಆರೋಪಿಗಳ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಆಧರಿಸಿ ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಸೆಲೆಬ್ರಿಟಿಗಳ ವಿರುದ್ಧ ಮಾತ್ರವಲ್ಲದೆ ಸಾಮಾನ್ಯ ಮಹಿಳೆಯರ ವಿರುದ್ಧವೂ ಇಂತಹ ಅಶ್ಲೀಲ ಕೃತ್ಯ ಎಸಗುವವರ ವಿರುದ್ಧ ಕಾನೂನು ತನ್ನ ಬಿಗಿ ಹಿಡಿತವನ್ನು ಮುಂದುವರಿಸಿದೆ.

ಇತ್ತೀಚೆಗೆ ಹಲವಾರು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್ ಮತ್ತು ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಮ್ಯಾ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಮ್ಯಾ ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮಾಡಿದ್ದು ತಪ್ಪು ಎಂದು ಬರೆದುಕೊಂಡಿದ್ದರು. ಅದೇ ಸಮಯದಲ್ಲಿ ಕೆಲವರು ರಮ್ಯಾನ ಟಾರ್ಗೆಟ್ ಮಾಡಲು ಆರಂಭಿಸಿದ್ದರು.ಇದೀಗ ತಮ್ಮ ಗುಂಡಿಗೆ ತಾವೇ ಬೀಳುವಂತೆ ರಮ್ಯಾ ತಿರುಗೇಟು ನೀಡಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





