ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳು ಬರುತ್ತಿರುವ ಬಗ್ಗೆ ನಟಿ ರಮ್ಯಾ ದೂರು ದಾಖಲಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಟಿ ರಮ್ಯಾ ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ. ಒಂದು ವೇಳೆ ದೂರು ಸಲ್ಲಿಸಿದರೆ, ಪೊಲೀಸ್ ಇಲಾಖೆಯು ಸೈಬರ್ ಕ್ರೈಂ ವಿಭಾಗದ ಮೂಲಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ,” ಎಂದು ಹೇಳಿದರು. “ದೂರು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು. ಕೆಲವೊಮ್ಮೆ ಸ್ವಯಂಪ್ರೇರಿತವಾಗಿಯೂ (ಸುಮೋಟೋ) ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಇದು ಪೊಲೀಸರ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಸರ್ಕಾರದಿಂದ ಯಾವುದೇ ನಿರ್ದೇಶನ ಬೇಕಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಇತ್ತೀಚೆಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. “ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು,” ಎಂದು ರಮ್ಯಾ ಹೇಳಿದ್ದರು. ಈ ಹೇಳಿಕೆಗೆ ಕೆಲವು ದರ್ಶನ್ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯಿಸಿ, ಅವಹೇಳನಕಾರಿ ಮತ್ತು ಅಶ್ಲೀಲ ಭಾಷೆಯಲ್ಲಿ ಕಮೆಂಟ್‌ಗಳನ್ನು ಮಾಡಿದ್ದರು.
ಈ ಬಗ್ಗೆ ಮತ್ತೊಂದು ಪೋಸ್ಟ್‌ನಲ್ಲಿ ರಮ್ಯಾ ಪ್ರತಿಕ್ರಿಯಿಸಿದ್ದು, “ರೇಣುಕಾಸ್ವಾಮಿಯವರಿಗೆ ಕಳುಹಿಸಿದ ಅಶ್ಲೀಲ ಸಂದೇಶಗಳಿಗೂ ದರ್ಶನ್ ಅಭಿಮಾನಿಗಳ ಕಾಮೆಂಟ್‌ಗಳಿಗೂ ಏನು ವ್ಯತ್ಯಾಸ?” ಎಂದು ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಕೆಲವು ಅಭಿಮಾನಿಗಳು ತಮ್ಮ ಅವಹೇಳನಕಾರಿ ಕಮೆಂಟ್‌ಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಪ್ರಸ್ತುತ, ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ಅಥವಾ ತಮ್ಮ ತೇಜೋವಧೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ, ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.